ಮಂಗಳೂರು: ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟ್ ರಸ್ತೆ ಅಗಲೀಕರಣಕ್ಕೆ 7,500ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಪ್ರಸ್ತಾಪಕ್ಕೆ ಪರಿಸರವಾದಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಸ್ತಾಪನೆಯು ಅರಣ್ಯ ಭೂಮಿಯ ವ್ಯಾಪಕ ಬಳಕೆಗೆ (ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ) ಅವಕಾಶ ಮಾಡಿಕೊಡಲಿದ್ದು, ವನ್ಯಜೀವಿಗಳ ಮೇಲೆ ಪರಿಣಾಮ ಮತ್ತು ಭೂಕುಸಿತದ ಅಪಾಯಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿ ವಿವೇಕ್ ಎಂ. ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಸ್ತೆ ವಿಸ್ತರಣೆಯು ಸುಮಾರು 39 ಎಕರೆ ಮೀಸಲು ಅರಣ್ಯದ ಮೇಲೆ ಪರಿಣಾಮ ಬೀರಲಿದೆ ಮತ್ತು ಕನಿಷ್ಠ 7,540 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ವಿವೇಕ್ ಉಲ್ಲೇಖಿಸಿದ್ದಾರೆ.
ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೆಪ್ಟೆಂಬರ್ 10, 2026 ರಂದು ಈ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿದ್ದರು. ಪ್ರಸ್ತಾವಿತ ರಸ್ತೆ ಮಾರ್ಗವು ಹುಲಿ ಸಂಚಾರ ಕಾರಿಡಾರ್ (tiger corridor) ಮೂಲಕ ಹಾದುಹೋಗುತ್ತದೆ ಮತ್ತು ಈ ಪ್ರದೇಶದಲ್ಲಿ ಕಾಡಾನೆಗಳು ನಿಯಮಿತವಾಗಿ ಸಂಚರಿಸುತ್ತವೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳ ಪರಿಶೀಲನಾ ವರದಿಯಲ್ಲಿ ದಾಖಲಿಸಿದ್ದಾರೆ ಎಂದು ವಿವೇಕ್ ತಿಳಿಸಿದ್ದಾರೆ.
ಅರಣ್ಯ ಭೂಮಿ ಪರಿವರ್ತನೆಯ ಪ್ರಸ್ತಾವನೆಯು ಮುಂದುವರಿಯುತ್ತಿದ್ದರೂ, ವನ್ಯಜೀವಿಗಳ ತೆರವು ಕಾರ್ಯ ಇನ್ನೂ ಪ್ರಾರಂಭಿಸಿಲ್ಲ ಮತ್ತು ವನ್ಯಜೀವಿ ಸಂರಕ್ಷಣಾ ಯೋಜನೆಯ ವಿವರವಾದ ವರದಿಯನ್ನು ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಸ್ತಾವಿತ ರಸ್ತೆ ಮಾರ್ಗವು ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಗುರುತಿಸಿರುವ ಕುದುರೆಮುಖ-ಪುಷ್ಪಗಿರಿ ಹುಲಿ ಕಾರಿಡಾರ್ ಸಂಪರ್ಕದ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಘಟ್ಟಗಳ ಭೂದೃಶ್ಯದ ಭಾಗವಾಗಿರುವ ಈ ಪ್ರದೇಶವು ಹಳೆಯ ಅರಣ್ಯಗಳು, ಕಣಿವೆಗಳು ಮತ್ತು ತೊರೆಗಳನ್ನು ಒಳಗೊಂಡಿದ್ದು, ಮಹತ್ವದ ಪರಿಸರ ಮೌಲ್ಯವನ್ನು ಹೊಂದಿದೆ.
ರಸ್ತೆ ವಿಸ್ತರಣಾ ಯೋಜನೆ ಪ್ರಸ್ತಾಪಿಸಿರುವ ರೀತಿಯ ಬಗ್ಗೆಯೂ ವಿವೇಕ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಸ್ತುತ ಅರಣ್ಯ ಭೂಮಿ ಪರಿವರ್ತನೆಯ ಪ್ರಸ್ತಾವನೆಯು ದಕ್ಷಿಣ ಕನ್ನಡದ ಚಾರ್ಮಾಡಿ ಗ್ರಾಮದಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿಯವರೆಗಿನ ಕೇವಲ 11.2 ಕಿ.ಮೀ ವ್ಯಾಪ್ತಿಯನ್ನು ಮಾತ್ರ ಒಳಗೊಂಡಿದೆ. ಆದರೆ ಮುಡಿಗೆರೆಯ ಕಡೆಗೆ ಮತ್ತಷ್ಟು ವಿಸ್ತರಣೆ ಮಾಡಲು ಹೆಚ್ಚುವರಿ ಅರಣ್ಯ ಭೂಮಿ ಪರಿವರ್ತನೆ ಮತ್ತು ಮರಗಳ ಕಡಿತದ ಅಗತ್ಯವಿರಬಹುದು ಎಂದು ಅವರು ಹೇಳಿದ್ದಾರೆ.
"ಇದು ಯೋಜನೆಯನ್ನು ಸಮಗ್ರ ಕಾರಿಡಾರ್ ಮಟ್ಟದ ಕ್ರಮವಾಗಿ ಕೈಗೊಳ್ಳುವ ಬದಲು, ಚೂರುಚೂರಾಗಿ (piecemeal manner) ಕೈಗೊಳ್ಳಲಾಗುತ್ತಿದೆ ಎಂಬ ಆತಂಕವನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಒಟ್ಟಾರೆ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದ್ದಾರೆ. ಅಲ್ಲದೇ ಭೂಕುಸಿತದ ಅಪಾಯಗಳನ್ನು ಅವರು ಉಲ್ಲೇಖಿಸಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪ್ರಸ್ತಾವನೆಯನ್ನು ಕಳುಹಿಸುವ ಮೊದಲು ಪರ್ಯಾಯ ಆಯ್ಕೆ ಪರಿಗಣಿಸಲು, ಅರಣ್ಯ ತಿರುವುಗಳನ್ನು ಕಡಿಮೆ ಮಾಡಲು, ವನ್ಯಜೀವಿ ತೆರವು ಮತ್ತು ತಗ್ಗಿಸುವ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವರವಾದ ಭೂವೈಜ್ಞಾನಿಕ ಮತ್ತು ಭೂಕುಸಿತ ಮೌಲ್ಯಮಾಪನಗಳನ್ನು ಕೈಗೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಮ್ಮ ಮನವಿಯು ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಪರ್ಕವನ್ನು ಸುಧಾರಿಸುವುದಕ್ಕೆ ವಿರೋಧವೇನಿಲ್ಲ. ಆದರೆ ಪರಿಸರ ಮತ್ತು ಭೂವೈಜ್ಞಾನಿಕ ಕಾಳಜಿಗಳನ್ನು ಪರಿಗಣಿಸಿ ಸಮತೋಲಿತ ವಿಧಾನವನ್ನು ಬಯಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.