ಬೆಂಗಳೂರು: ಇಂದು ರಾಜ್ಯ ಸರ್ಕಾರ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು.
ಇಂದು ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಡಿ ಕೆ ಶಿವಕುಮಾರ್ ಪೌರ ಕಾರ್ಮಿಕರು ಧರಿಸುವ ಯೂನಿಫಾರ್ಮ್ ತೊಟ್ಟು ಭಾಷಣ ಮಾಡಿದರು. ಕಾರಣ ಕುತೂಹಲವಾಗಿದೆ.
ಪೌರಕಾರ್ಮಿಕೆಯೊಬ್ಬರ ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗಳನ್ನು ಶಾಲೆಗೆ ಬಿಡಲು ಪೌರಾಕಾರ್ಮಿಕೆ ಬಳಿ ಹೋದಾಗ ಮಗಳ ಸಹಾಪಾಠಿ, ನಿಮ್ಮಮ್ಮ ಕಾರ್ಪೋರೇಶನ್ ಯುನಿಫಾರ್ಮ್ ಹಾಕೊಂಡು ಬಂದಿದ್ದಾರೆ, ವಾಸನೆ.. ದೂರ ಕೂತ್ಕೋ..ನನ್ನ ಪಕ್ಕ ಕೂತ್ಕೋಬೇಡ ಅಂತ ಹೀಯಾಳಿಸಿ ದೂರ ತಳ್ಳಿದಳಂತೆ.
ಇದನ್ನು ನೆನೆದು ಅಮ್ಮ ಕಣ್ಣೀರು ಹಾಕಿದ ವಿಡಿಯೋ ನೋಡಿದ ಸಿಎಂ ಡಿ ಕೆ ಶಿವಕುಮಾರ್, ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಸ್ಟೇಜ್ ಮೇಲೆ ಇಂದು ಪೌರಕಾರ್ಮಿಕರ ಯುನಿಫಾರ್ಮ್ ತರಿಸಿ, ಧರಿಸಿಕೊಂಡರು ಎಂದು ಅವರ ಮಾಧ್ಯಮ ಸಲಹೆಗಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್, ಪೌರ ಕಾರ್ಮಿಕರಿಗೆ ತಮ್ಮ ವೃತ್ತಿ ಬಗ್ಗೆ ಹೆಮ್ಮೆಯಿರಬೇಕು. ಪೌರಕಾರ್ಮಿಕರಿಂದಲೇ ನಮ್ಮ ಪರಿಸರ, ರಸ್ತೆ, ನಗರ ಸ್ವಚ್ಛವಾಗಿರುವುದು. ಅವರ ಕಲ್ಯಾಣಕ್ಕೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು.
ಪೌರಕಾರ್ಮಿಕರ ಸ್ವಾಭಿಮಾನದ ಬದುಕು ಕಾಣಲು, ಕಾಯಕ ಜೀವಿಗಳಾದ ನಿಮ್ಮ ಹಿತವೇ ಸರ್ಕಾರಕ್ಕೆ ಮುಖ್ಯವಾಗಿದೆ. ಪೌರ ಕಾರ್ಮಿಕರ ಭತ್ಯೆಯನ್ನು 3 ಸಾವಿರದಿಂದ 7 ಸಾವಿರಕ್ಕೆ ಹೆಚ್ಚಿಸಲು, ಬೆಳಗಿನ ಉಪಹಾರಕ್ಕೆ 35ರಿಂದ 70 ರೂಪಾಯಿಗೆ ಏರಿಸಲು ಆದೇಶ ಹೊರಡಿಸುತ್ತೇವೆ ಎಂದರು.