ಮಂಗಳೂರು: 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರಿನ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್, ಬೆಂಗಳೂರಿನ ಸಿಐಡಿ ಎಸ್‌ಪಿ ಲೋಕೇಶ್ ಜಗಲಾಸರ್ ಹಾಗೂ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಎಸ್‌ಐಟಿ ರಚಿಸಿ, ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ತಮ್ಮ ಮಗಳ ಪ್ರಕರಣದ ಮರುತನಿಖೆಗೆ ಹಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿದೆ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದ್ದರು.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ, 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳದ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿತ್ತು.
ಘಟನೆ ನಡೆದು ಸುಮಾರು 14 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಹೊಸ ತನಿಖೆಗೆ ಆದೇಶ ನೀಡಿದೆ. ಈ ಹಿಂದೆ ಕರ್ನಾಟಕ ಅಪರಾಧ ತನಿಖಾ ದಳ (ಸಿಐಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಗಳಲ್ಲಿ ಪ್ರಕರಣದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಪ್ರಕರಣದ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಸುಮಾರು ಆರು ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 2023ರ ಜೂನ್‌ನಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು.
2024ರಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಮರುತನಿಖೆಗೆ ಆಗ್ರಹಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಅವರು ಸುಪ್ರೀಂಕೋರ್ಟ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದರು.
ಆರಂಭದಲ್ಲಿ ಕರ್ನಾಟಕ ಸರ್ಕಾರ ಈ ಅರ್ಜಿಯನ್ನು ವಿರೋಧಿಸಿತ್ತು. ಆದರೆ, ಬಳಿಕ ತನ್ನ ನಿಲುವು ಬದಲಿಸಿಕೊಂಡು, ಹೊಸದಾಗಿ ತನಿಖೆ ನಡೆಸಲು ಎಸ್‌ಐಟಿ ರಚಿಸಲು ಸಿದ್ಧವಿರುವುದಾಗಿ ಈ ವರ್ಷದ ಆರಂಭದಲ್ಲೇ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.