ಬೆಂಗಳೂರು/ನವದೆಹಲಿ: ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಎದುರಿಸುತ್ತಿರುವ ಕಳವಳಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಒತ್ತಾಯಿಸಿದ್ದಾರೆ.
ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಪಿ) ಪರಿಷ್ಕರಣೆ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಕುರಿತ ಪ್ರಸ್ತಾವಿತ ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕದ ಕಳವಳಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಒತ್ತಾಯಿಸಿದ್ದಾರೆ.
ಪರಿಸರ ಸಂರಕ್ಷಣೆಯ ಜತೆಗೆ ಸ್ಥಳೀಯರ ಜೀವನೋಪಾಯ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು, ಕರ್ನಾಟಕಕ್ಕೆ ರಾಜ್ಯ-ನಿರ್ದಿಷ್ಟವಾಗಿ ಅಗತ್ಯವಿರುವಷ್ಟು ನಮ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕರಾವಳಿ ವಲಯ ನಿರ್ವಹಣಾ ಯೋಜನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಸಮುದಾಯಗಳು, ಕರಾವಳಿ ನಿವಾಸಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಹಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಕರಾವಳಿ ನಿಯಂತ್ರಣ ವಲಯದ ವರ್ಗೀಕರಣದಲ್ಲಿನ ದೋಷಗಳು, ಸರ್ವೆ ಗಡಿಗಳು, ವಸತಿ ಪ್ರದೇಶಗಳು, ಮೀನುಗಾರಿಕಾ ಮೂಲಸೌಕರ್ಯ ಹಾಗೂ ಸಾಂಪ್ರದಾಯಿಕ ಜೀವನೋಪಾಯದ ಪ್ರದೇಶಗಳನ್ನು ಸರಿಯಾಗಿ ಗುರುತಿಸದಿರುವ ಬಗ್ಗೆ ಆಕ್ಷೇಪಗಳಿವೆ.
ಅಧಿಕೃತ ಕಂದಾಯ ದಾಖಲೆಗಳು, ಉಪಗ್ರಹ ಚಿತ್ರಗಳು ಹಾಗೂ ಸ್ಥಳ ಪರಿಶೀಲನೆಯನ್ನು ಆಧರಿಸಿ ಸರ್ವೆ ಸಂಖ್ಯೆವಾರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೀನು ಇಳಿಸುವ ಕೇಂದ್ರಗಳು, ದೋಣಿ ದುರಸ್ತಿ ಸ್ಥಳಗಳು, ಮೀನುಗಾರಿಕಾ ಬಲೆ ದುರಸ್ತಿ ಪ್ರದೇಶಗಳು ಹಾಗೂ ಮೀನು ಸಂಸ್ಕರಣಾ ಘಟಕಗಳಂತಹ ಸಾಂಪ್ರದಾಯಿಕ ಮೀನುಗಾರಿಕಾ ಮೂಲಸೌಕರ್ಯಗಳಿಗೆ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ವಿಚಾರದಲ್ಲೂ ಶಿವಕುಮಾರ್ ತಮ್ಮ ಹಿಂದಿನ ಕಳವಳವನ್ನು ಪುನರುಚ್ಚರಿಸಿದ್ದಾರೆ.
ಕೃಷಿ ಭೂಮಿ, ತೋಟಗಳು, ವಸತಿ ಪ್ರದೇಶಗಳು ಹಾಗೂ ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಪ್ರದೇಶಗಳನ್ನು ಇಎಸ್‌ಎ ವ್ಯಾಪ್ತಿಗೆ ಸೇರಿಸುವ ಕುರಿತು ರಾಜ್ಯಕ್ಕೆ ಆತಂಕವಿದೆ ಎಂದು ತಿಳಿಸಿದ್ದಾರೆ.
ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಭೌತಿಕ ಪರಿಶೀಲನೆ ಹಾಗೂ ವೈಜ್ಞಾನಿಕ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಸಲ್ಲಿಸಿರುವ ಪ್ರಸ್ತಾವನೆಗಳನ್ನು ತಾಂತ್ರಿಕ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಪರಿಶೀಲನೆ, ಕಂದಾಯ ನಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ಕ್ಷೇತ್ರ ಸಮೀಕ್ಷೆಗಳ ಮೂಲಕ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಎಸ್‌ಎ ಅಧಿಸೂಚನೆಯನ್ನು ಅಂತಿಮಗೊಳಿಸುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.