ಸಂಗ್ರಹ ಚಿತ್ರ 
ರಾಜ್ಯ

ಆಸ್ಪತ್ರೆ, ಮೆಡಿಕಲ್‌ ಸ್ಟೋರ್‌ಗಳಿಗೂ ನಕಲಿ ಔಷಧಿ: ಅಸಲಿ ಸ್ಟಾಕ್‌ನಲ್ಲಿ ಬೆರೆಸಿ ಮಾರಾಟ ಮಾಡುತ್ತಿದ್ದ ಖದೀಮರು, SIT ತನಿಖೆಯಲ್ಲಿ ಬಯಲು..!

ಗುಣಮಟ್ಟದ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಖದೀಮರು ಅಸಲಿ ಔಷಧಿಗಳ ಸ್ಟಾಕ್ ಜೊತೆಗೆ ನಕಲಿ ಔಷಧಿಗಳನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ತಂತ್ರ ಬೆಳಕಿಗೆ ಬಂದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ... ನೀವು ಆಸ್ಪತ್ರೆ ಅಥವಾ ಫಾರ್ಮಸಿಗಳಿಂದ ಕೊಂಡುಕೊಳ್ಳುವ ಜೀವರಕ್ಷಕ ಔಷಧಿಗಳು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ನಗರದ ವಿಶೇಷ ತನಿಖಾ ದಳ (SIT) ಅಂತರರಾಜ್ಯ ನಕಲಿ ಔಷಧಿ ಜಾಲವೊಂದನ್ನು ಭೇದಿಸಿದ್ದು, ತನಿಖೆ ವೇಳೆ ಆಘಾತಕಾರಿ ಸತ್ಯಗಳು ಹೊರಬಂದಿವೆ.

ಗುಣಮಟ್ಟದ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಖದೀಮರು ಅಸಲಿ ಔಷಧಿಗಳ ಸ್ಟಾಕ್ ಜೊತೆಗೆ ನಕಲಿ ಔಷಧಿಗಳನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ ಐನಾತಿ ತಂತ್ರ ಬೆಳಕಿಗೆ ಬಂದಿದೆ.

ಅನುಮಾನ ಬಾರದಂತೆ ಮಾಡಲು ಔಷಧ ವಿತರಣೆ ಸಂಸ್ಥೆಯಾಗಿರುವ ಡಿಎಂ ಫಾರ್ಮಾ ಮೂಲಕ ಅಸಲಿ ಔಷಧಿಗಳೊಂದಿಗೆ ನಕಲಿ ಔಷಧಿಗಳನ್ನೂ ವಿತರಿಸಲಾಗುತ್ತಿತ್ತು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ತಿಳಿಸಿದ್ದಾರೆ.

ಈ ದಂಧೆಯ ಪ್ರಮುಖ ಆರೋಪಿ ಪ್ರಶಾಂತ್ ರಾಜನ್‌ಬಾಬು 10 ವರ್ಷಕ್ಕೂ ಹೆಚ್ಚು ಕಾಲ ನವದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಔಷಧ ಉದ್ಯಮ ಹಾಗೂ ಅದರ ಕಾರ್ಯವೈಖರಿ ಕುರಿತು ಆತ ವ್ಯಾಪಕ ಜ್ಞಾನ ಗಳಿಸಿದ್ದ. ಆಸ್ಪತ್ರೆಗಳಲ್ಲಿ ಯಾವ ಔಷಧಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಅವುಗಳ ಮಾರುಕಟ್ಟೆ ದರ ಹಾಗೂ ಲಾಭದ ಪ್ರಮಾಣ ಸೇರಿದಂತೆ ಹಲವು ಮಾಹಿತಿಗಳನ್ನು ಆತ ತಿಳಿದುಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

2021ರಲ್ಲಿ ಆತ ತನ್ನ ಪತ್ನಿ ಹಾಗೂ ಸ್ನೇಹಿತ ಬಾಲಸುಬ್ರಹ್ಮಣ್ಯ ಅವರೊಂದಿಗೆ ಪಾಲುದಾರರಾಗಿ ಚೆನ್ನೈನಲ್ಲಿ ಡಿಎಂ ಫಾರ್ಮಾ ಸಂಸ್ಥೆಯನ್ನು ಆರಂಭಿಸಿದ್ದ. ಈ ಕಂಪನಿ ಆಸ್ಪತ್ರೆಗಳು ಮತ್ತು ಔಷಧ ಅಂಗಡಿಗಳಿಗೆ ನಿಯಮಿತವಾಗಿ ಔಷಧಿಗಳನ್ನು ಪೂರೈಸುತ್ತಿತ್ತು.

ಕೆಲವು ಔಷಧಿಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಅವುಗಳಿಂದ ಭಾರೀ ಲಾಭ ಗಳಿಸುವ ಅವಕಾಶವನ್ನು ಗಮನಿಸಿದ ಬಳಿಕ ರಾಜನ್‌ಬಾಬು ನಕಲಿ ಔಷಧಿಗಳ ತಯಾರಿಕೆಯನ್ನು ಆರಂಭಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತೆಯಾಗುವುದನ್ನು ತಪ್ಪಿಸಲು ಅಸಲಿ ಔಷಧ ಕಂಪನಿಗಳ ಲೇಬಲ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಹೋಲುವ ರೀತಿಯ ಲೇಬಲ್‌ಗಳನ್ನು ಆತ ಬಳಸುತ್ತಿದ್ದ ಎನ್ನಲಾಗಿದೆ. ಇದರ ಭಾಗವಾಗಿ 2025ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಸಮೀಪದ ಫಾರ್ಮ್‌ಹೌಸ್‌ವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ನಕಲಿ ಔಷಧಿಗಳನ್ನು ತಯಾರಿಸಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಔಷಧ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಉತ್ತರಾಖಂಡ ಹಾಗೂ ಇತರ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಕಂಪನಿಯೊಂದೂ ಸೇರಿದಂತೆ ಜನಪ್ರಿಯ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಹೊಂದಿದ್ದ ನಕಲಿ ಔಷಧಿಗಳನ್ನು ಕೃಪಾ ಫಾರ್ಮಾ ಸೇರಿದಂತೆ ಹಲವು ಸಂಸ್ಥೆಗಳ ಮೂಲಕ ನಗರದ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳಿಗೆ ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗಳಿಂದ ಮಾಹಿತಿ ಕೋರಿದ ಎಸ್‌ಐಟಿ

ಈ ನಡುವೆ ತನಿಖೆಯ ಭಾಗವಾಗಿ ಆರೋಪಿಗಳಿಂದ ಔಷಧಿಗಳನ್ನು ಖರೀದಿಸಿದ್ದ ಆಸ್ಪತ್ರೆಗಳ ಅಧಿಕಾರಿಗಳನ್ನೂ ಎಸ್‌ಐಟಿ ವಿಚಾರಣೆ ನಡೆಸಲು ಮುಂದಾಗಿದೆ.

ಔಷಧ ಖರೀದಿಗೆ ಸಂಬಂಧಿಸಿದ ವಿವರಗಳ ನೀಡುವಂತೆ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೀಲರ್‌ಗಳು, ವಿತರಕರು ಹಾಗೂ ಖರೀದಿದಾರರನ್ನು ಒಳಗೊಂಡಿರುವ ಔಷಧ ಪೂರೈಕೆ ಸರಪಳಿಯ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಹಣಕಾಸು ವಹಿವಾಟುಗಳನ್ನೂ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಎಸ್‌ಡಿಎ) ನಕಲಿ ಔಷಧಿಗಳ ವಿತರಣೆ ಮತ್ತು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ 16 ಔಷಧ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳ ಪರವಾನಗಿಗಳನ್ನು ರದ್ದುಗೊಳಿಸಿತ್ತು. ನೆಲಮಂಗಲದಲ್ಲಿರುವ ಫೈಜರ್ ಔಷಧ ಕಂಪನಿಯ ಡಿಪೋ ಸೇರಿದಂತೆ ಎಂಟು ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿತ್ತು.

ಕಿಂಗ್‌ಪಿನ್‌ನ ಆಪ್ತ ಸಹಾಯಕ ಬಂಧನ

ಏತನ್ಮಧ್ಯೆ ನಕಲಿ ಔಷಧಿ ದಂಧೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರಶಾಂತ್ ರಾಜನ್‌ಬಾಬು ಅವರ ಆಪ್ತ ಸಹಾಯಕನನ್ನು ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಚೆನ್ನೈನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಬಾಲಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ.

ಬಾಲಸುಬ್ರಹ್ಮಣ್ಯ ಹಾಗೂ ಪ್ರಶಾಂತ್ ರಾಜನ್‌ಬಾಬು ಅವರ ಪತ್ನಿ ಡಿಎಂ ಫಾರ್ಮಾ ಸಂಸ್ಥೆಯ ಮಾಲೀಕರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದ ಬಳಿಕ ಬಾಲಸುಬ್ರಹ್ಮಣ್ಯನನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.

ಶಿವಮೊಗ್ಗ ಮೂಲದ ಹಾಗೂ ಬೆಂಗಳೂರಿನ ಪಾಪರೆಡ್ಡಿಪಾಳ್ಯದಲ್ಲಿ ವಾಸಿಸುತ್ತಿದ್ದ ರಾಜನ್‌ಬಾಬುವನ್ನು ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

ಮರುತನಿಖೆಗೂ ಮುನ್ನ ಸೌಜನ್ಯ ಪ್ರಕರಣಕ್ಕೆ ಹಿನ್ನಡೆ: SIT ತಂಡದಿಂದ ಕೈಬಿಡುವಂತೆ ಎಎಸ್ ಪಿ ಪತ್ರ

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಹಾಶಿಮ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!