ಬೆಂಗಳೂರು: ಶುಕ್ರವಾರ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅವರ ಅಂತಿಮ ವಿಧಿವಿಧಾನವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಅನಂತಮೂರ್ತಿ ಅವರ ಅಂತಿಮ ವಿಧಾನವನ್ನು ನೆರವೇರಿಸಲು ನಿರ್ಧರಿಸಲಾಗಿದ್ದು, ಸರ್ಕಾರಿ ಸಕಲ ಗೌರವಗಳೊಂದಿಗೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅನಂತಮೂರ್ತಿ ಅವರ ಕುಟುಂಬಸ್ಥರು ಮತ್ತು ಅವರ ಆಪ್ತ ಸ್ನೇಹಿತರೊಂದಿಗೆ ಚರ್ಚಿಸಿದ ಬಳಿಕ ಬೆಂಗಳೂರಿನ ಕಲಾಗ್ರಾಮದಲ್ಲಿ ಹಿಂದೂ ಧರ್ಮದ ಅನ್ವಯ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಎಂದು ಸಚಿವೆ ಉಮಾಶ್ರೀ ಅವರು ಹೇಳಿದರು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಮಾಧಿ ಇರುವ ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನವನ್ನು ನಡೆಸಲಾಗುತ್ತದೆ. ಅನಂತಮೂರ್ತಿ ಅವರು ಜಾತ್ಯಾತೀತವಾದಿಯಾಗಿದ್ದು, ಅವರ ಅಂತಿಮ ವಿಧಿವಾಧನದ ವೇಳೆ ಮುಸ್ಲಿಂ ಬಾಂಧವರ ಪ್ರಾರ್ಥನೆ ಮತ್ತು ಕ್ರಿಶ್ಚಿಯನ್ ಧರ್ಮೀಯರಿಂದ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಇದಕ್ಕೂ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಅನಂತಮೂರ್ತಿ ಅವರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಬೆಳಗ್ಗೆ 10ಗಂಟೆಗೆ ಅನಂತಮೂರ್ತಿ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರ ಅನಂತಮೂರ್ತಿ ಅವರ ಪಾರ್ಥೀವ ಶರೀರದ ದರ್ಶನ ಪಡೆಯಬಹುದು. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅನಂತಮೂರ್ತಿ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗುತ್ತದೆ.