ಜೀವನಶೈಲಿ

ಮಕ್ಕಳೊಂದಿಗೆ ಓದುವುದರಿಂದ ಅವರಲ್ಲಿ ಕಲಿಕಾ ಕೌಶಲ್ಯ ವೃದ್ಧಿಸುತ್ತದೆ: ಅಧ್ಯಯನ

Sumana Upadhyaya
ಮಕ್ಕಳ ಆರಂಭಿಕ ಬಾಲ್ಯದಲ್ಲಿ ಅಂದರೆ ಮೂರ್ನಾಲ್ಕು ವರ್ಷಗಳ ಮುಂಚೆ ಮಕ್ಕಳ ಜೊತೆ ಪೋಷಕರು ಅಥವಾ ದೊಡ್ಡವರು ಜೊತೆ ಸೇರಿ ಓದಿದರೆ ಮಕ್ಕಳಲ್ಲಿ ಬೇಗನೆ ಶಬ್ದಕೋಶ, ಕಲಿಕೆ ಮತ್ತು ಓದುವ ಕೌಶಲಗಳು ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಮಕ್ಕಳೊಂದಿಗೆ ಪೋಷಕರು ಪುಸ್ತಕ ಹಿಡಿದು ಕುಳಿತು ಓದುವುದರಿಂದ ಮತ್ತು ಆ ಪುಸ್ತಕಕ್ಕೆ ಸಂಬಂಧಪಟ್ಟಂತೆ ಮಕ್ಕಳೊಂದಿಗೆ ಚರ್ಚೆ ನಡೆಸುವುದು, ಅದರಲ್ಲಿರುವ ಚಿತ್ರಗಳನ್ನು ತೋರಿಸಿ ವಿವರಿಸಿ ಹೇಳುವುದು, ಪುಸ್ತಕದಲ್ಲಿರುವ ಪಾತ್ರಗಳ ಕುರಿತು ಭಾವನಾತ್ಮಕವಾಗಿ ಮಾತನಾಡುವುದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಓದುವ ಕೌಶಲ್ಯ ಬೆಳೆಯುತ್ತದೆ ಮತ್ತು ಮುಂದೆ ಸಾಕ್ಷರತೆಯ ಮಟ್ಟ ಕೂಡ ವರ್ಧಿಯಾಗುತ್ತದೆ ಎಂದು ತಿಳಿದುಬಂದಿದೆ.
ಪುಟ್ಟ ಮಕ್ಕಳಲ್ಲಿ ಓದಲು ಪ್ರೋತ್ಸಾಹ ನೀಡುವುದರಿಂದ ಅದು ಅವರ ಭಾಷೆ, ಸಾಕ್ಷರತೆ ಮತ್ತು ಓದುವ ಕೌಶಲ್ಯದ ಮೇಲೆ ಕೊನೆಯವರೆಗೂ ಪ್ರಭಾವ ಬೀರುತ್ತದೆ ಎಂದು ಅಧ್ಯಯನದ ಲೇಖಕ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕ್ಯಾರೊಲಿನ್ ಕೇಟ್ಸ್ ತಿಳಿಸಿದ್ದಾರೆ.
ಪುಟ್ಟ ಮಕ್ಕಳ ಜೊತೆಗೂಡಿ ಪುಸ್ತಕ ಹಿಡಿದು ಓದುವುದರಿಂದ ಶಾಲೆಗೆ ಸೇರುವ ಹೊತ್ತಿಗೆ ಅವರಲ್ಲಿ ಓದಿ, ಬರೆಯುವ ಕೌಶಲ್ಯ ರೂಢಿಯಾಗಿರುತ್ತದೆ ಎಂದು ಕೇಟ್ಸ್ ಹೇಳುತ್ತಾರೆ.
ಈ ಅಧ್ಯಯನ 2017ರ ಸಾನ್ ಫ್ರಾನ್ಸಿಸ್ಕೋದ ಪೀಡಿಯಾಟ್ರಿಕ್ ಅಕಾಡೆಮಿಕ್ ಸೊಸೈಟೀಸ್ ಸಭೆಯಲ್ಲಿ ಮಂಡನೆಯಾಗಿದೆ.
ಅಧ್ಯಯನಕ್ಕಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಶಿಶುಗಳ ನರ್ಸರಿಯಿಂದ 250ಕ್ಕೂ ಹೆಚ್ಚು ತಾಯಂದಿರು ಮತ್ತು ಶಿಶುಗಳ ಜೋಡಿಯನ್ನು ಅಧ್ಯಯನಕ್ಕೊಳಪಡಿಸಲಾಯಿತು. 6 ತಿಂಗಳಿನಿಂದ 4 ಮತ್ತು ನಾಲ್ಕೂವರೆ ವರ್ಷಗಳವರೆಗಿನ ಮಕ್ಕಳನ್ನು ಅವರು ಹೇಗೆ ಶಬ್ದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ, ಓದುವ ಕೌಶಲ್ಯ ಹೇಗೆ ಬೆಳೆಯುತ್ತದೆ ಇತ್ಯಾದಿಗಳನ್ನು ಅಧ್ಯಯನ ನಡೆಸಲಾಯಿತು.
ಮಕ್ಕಳ ಪ್ರಾಥಮಿಕ ಆರೈಕೆಯಲ್ಲಿ ಪೋಷಕರ ಪಾತ್ರದ ಮಹತ್ವವನ್ನು ಈ ಅಧ್ಯಯನದ ಫಲಿತಾಂಶ ಸಾರುತ್ತದೆ.
SCROLL FOR NEXT