ಬೆಳಗಿನ ತಿಂಡಿ ಆಗಲಿ, ಮಧ್ಯಾಹ್ನದ ಊಟ ಆಗಲಿ, ಅಥವಾ ರಾತ್ರಿಯ ಊಟವೇ ಆಗಲಿ ಕೊನೆಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಮುಗಿಯುವುದೇ ಇಲ್ಲ.! ಊಟದ ರುಚಿಯನ್ನು ಹೆಚ್ಚಿಸಲು ಇದೊಂದು ರೂಢಿಯಾಗಿ ಹೋಗಿದೆ. ಆದರೆ ಊಟದ ತಕ್ಷಣ ಕಾಫಿ ಟೀ ಕುಡಿಯುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ. ಪೌಷ್ಟಿಕ ತಜ್ಞರು ಮತ್ತು ವೈದ್ಯರ ಪ್ರಕಾರ ಈ ಅಭ್ಯಾಸದಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಕೆಟ್ಟದೇ ಹೆಚ್ಚು ಆಗುತ್ತದೆ.
ಊಟದ ನಂತರ ಕಾಫಿ-ಟೀ ಯಿಂದ ಆಗುವ ತೊಂದರೆ ಏನು?
ಟೀ ಮತ್ತು ಕಾಫಿಯಲ್ಲಿ ಟ್ಯಾನಿನ್ ಮತ್ತು ಕೆಫೀನ್ ಎಂಬ ಅಂಶಗಳು ಇರುತ್ತವೆ. ಊಟದ ತಕ್ಷಣ ಇವುಗಳನ್ನು ಕುಡಿದರೆ ಆಹಾರದಲ್ಲಿರುವ ಕಬ್ಬಿಣ ಮತ್ತು ಪ್ರೋಟೀನ್ ಹೀರಿಕೊಳ್ಳುವುದನ್ನು ತಡೆಯುತ್ತವೆ. ವಿಶೇಷವಾಗಿ ಸೊಪ್ಪು, ಡಾಲ್, ಮೊಟ್ಟೆ ಮತ್ತು ಹಸಿರು ತರಕಾರಿಗಳಲ್ಲಿರುವ ಕಬ್ಬಿಣವನ್ನು ದೇಹ ಸರಿಯಾಗಿ ಬಳಸಿಕೊಳ್ಳಲು ಆಗುವುದಿಲ್ಲ. ಇದರಿಂದ ರಕ್ತಹೀನತೆ ಮತ್ತು ಆಯಾಸದ ಸಮಸ್ಯೆ ಬರಬಹುದು. ಜೊತೆಗೆ ಕೆಫೀನ್ ಜೀರ್ಣಕ್ರಿಯೆಯನ್ನು ನಿಧಾನ ಮಾಡಿ ಗ್ಯಾಸ್ ಮತ್ತು ಉಬ್ಬರಕ್ಕೆ ಕಾರಣವಾಗುತ್ತದೆ.
ಹಾಗಾದ್ರೆ, ಯಾವಾಗ ಕುಡಿಯುವುದು ಉತ್ತಮ?
ಊಟ ಮುಗಿದ ಕನಿಷ್ಠ 45 ನಿಮಿಷದಿಂದ 1 ಗಂಟೆ ನಂತರ ಕಾಫಿ ಅಥವಾ ಟೀ ಕುಡಿಯುವುದು ಉತ್ತಮ. ಈ ಸಮಯದೊಳಗೆ ಆಹಾರದಲ್ಲಿರುವ ಪೋಷಕಾಂಶಗಳು ದೇಹ ಸೇರಿಕೊಳ್ಳುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಲವಾದ ಕಾಫಿ ಕುಡಿಯುವುದೂ ಸರಿಯಲ್ಲ. ಇದರಿಂದ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು. ಮಧ್ಯಾಹ್ನ 10 ರಿಂದ 11 ಮತ್ತು ಸಂಜೆ 3 ರಿಂದ 4 ರ ನಡುವೆ ಕುಡಿದರೆ ದೇಹಕ್ಕೆ ಚುರುಕು ಸಿಗುತ್ತದೆ.
ಯಾರು ಯಾರು ವಿಶೇಷ ಎಚ್ಚರಿಕೆ ವಹಿಸಬೇಕು?
ರಕ್ತಹೀನತೆ, ಗರ್ಭಿಣಿಯರು, ಮಕ್ಕಳು ಮತ್ತು ಹಾಲುಣಿಸುವ ತಾಯಂದಿರು ಊಟದ ನಂತರ ಟೀ ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಒಳ್ಳೆಯದು. ಮಲಗುವ 6 ಗಂಟೆ ಮೊದಲು ಕಾಫಿ ಕುಡಿದರೆ ನಿದ್ರೆ ಕೆಡುತ್ತದೆ. ಬದಲಾಗಿ ಊಟದ ನಂತರ ಒಂದು ಲೋಟ ಉಗುರುಬೆಚ್ಚಗಿನ ನೀರು ಅಥವಾ ಸೊಪ್ಪಿನ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.
ಸಿಂಪಲ್ ನಿಯಮ:
ಊಟ ಮತ್ತು ಕಾಫಿ ಟೀ ನಡುವೆ ಕನಿಷ್ಠ ಒಂದು ಗಂಟೆ ಅಂತರ ಇರಲಿ. ಆಗ ರುಚಿಯೂ ಸಿಗುತ್ತದೆ ಮತ್ತು ಆರೋಗ್ಯವೂ ಹಾಳಾಗುವುದಿಲ್ಲ.