ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾಕಶ್ಟು ಮಂದಿ ಎಸಿ ಬಳಕೆ ಹೆಚ್ಚಾಗಿಸಿದ್ದಾರೆ. ಬಹುತೇಕ ಮಂದಿ ಮನೆ, ಕಚೇರಿಗಳಲ್ಲಿ ಗಂಟೆಗಟ್ಟಲೆ ಎಸಿ ಗಾಳಿಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಆದರೆ, ಎಸಿ ಹೆಚ್ಚು ಬಳಕೆ ಮಾಡಿದರೆ, ಚರ್ಮ ವಯಸ್ಸಾದವರಂತೆ ಕಾಣುತ್ತದೆಯೇ ಎಂಬ ಪ್ರಶ್ನೆಗಳು ಹಲವರಲ್ಲಿ ಎದುರಾಗುತ್ತಿದ್ದು, ಇದಕ್ಕೆ ಉತ್ತರ ಸಂಪೂರ್ಣವಾಗಿ “ಹೌದು” ಅಥವಾ “ಇಲ್ಲ” ಎಂದು ಹೇಳಲಾಗದು, ಆದರೆ, ಹೆಚ್ಚು ಬಳಕೆ ಮಾಡಿದರೆ, ಚರ್ಮದ ಮೇಲಿನ ಪರಿಣಾಮ ಆಗುವುದಂತೂ ಸತ್ಯವೇ.
ವಿಶೇಷವಾಗಿ ಬೇಸಿಗೆಯಲ್ಲಿ ದಿನಪೂರ್ತಿ ಏರ್ ಕಂಡೀಷನರ್ ಇರುವ ಕೊಠಡಿಯಲ್ಲಿ ಕೆಲಸ ಮಾಡುವವರು ಅಥವಾ ಹೆಚ್ಚು ಸಮಯ ಕಳೆಯುವವರು ಚರ್ಮದಲ್ಲಿ ಬದಲಾವಣೆಗಳನ್ನು ಗಮನಿಸಬಹುದು.
ಎಸಿ ಗಾಳಿ ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಎಸಿ ಗಾಳಿಯ ಮುಖ್ಯ ಲಕ್ಷಣವೆಂದರೆ ಅದು ಕೊಠಡಿಯ ತೇವಾಂಶವನ್ನು ಕಡಿಮೆ ಮಾಡುವುದು. ತೇವಾಂಶ ಕಡಿಮೆಯಾದಾಗ ಗಾಳಿ ಒಣಗುತ್ತದೆ ಮತ್ತು ಆ ಒಣ ಗಾಳಿ ನೇರವಾಗಿ ಚರ್ಮದಿಂದ ಸಹಜ ತೇವವನ್ನು ಎಳೆದುಕೊಳ್ಳುತ್ತದೆ. ಇದರಿಂದ ಚರ್ಮ ಕ್ರಮೇಣ ಒಣಗಲು ಆರಂಭಿಸುತ್ತದೆ.
ಆರಂಭದಲ್ಲಿ ಇದು ಸಣ್ಣ ಮಟ್ಟದ ಬಿಗಿತ, ತುಟಿಗಳು ಒಣಗುವುದು ಅಥವಾ ಮುಖದಲ್ಲಿ ಹೊಳೆಯುವಿಕೆ ಕಡಿಮೆಯಾಗುವುದನ್ನು ನಾವು ಕಾಣಬಹುದು. ಆದರೆ, ದೀರ್ಘಕಾಲ ಈ ಪರಿಸ್ಥಿತಿ ಮುಂದುವರಿದರೆ ಚರ್ಮದ ಶುಷ್ಕತೆಯನ್ನು ಕಳೆದುಕೊಳ್ಳುತ್ತದೆ.
ಶುಷ್ಕತೆ ಕಡಿಮೆಯಾದಾಗ ಚರ್ಮ ಮೊದಲಿನಂತೆ ನಯವಾಗಿ ಮತ್ತು ತಾಜಾವಾಗಿ ಕಾಣುವುದಿಲ್ಲ. ನಿಧಾನವಾಗಿ ಸೂಕ್ಷ್ಮ ರೇಖೆಗಳು, ಕಣ್ಣುಗಳ ಸುತ್ತಲಿನ ಮಡಿಕೆಗಳು ಮತ್ತು ಚರ್ಮದಲ್ಲಿ ಬಿಗಿತದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರಿಂದಲೇ ಕೆಲವರು ಚಿಕ್ಕ ವಯಸ್ಸಿನಲ್ಲೇ ಬೇಗ ವಯಸ್ಸಾದವಂತೆ ಕಾಣಿಸುತ್ತಾರೆ.
ಇನ್ನೊಂದು ಮುಖ್ಯ ಅಂಶವೆಂದರೆ ಚರ್ಮದ ರಕ್ಷಣಾತ್ಮಕ ಪದರ. ಈ ಪದರವು ಹೊರಗಿನ ಧೂಳು, ಮಾಲಿನ್ಯ ಮತ್ತು ಹಾನಿಕಾರಕ ಅಂಶಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಎಸಿ ಗಾಳಿಯಿಂದ ನಿರಂತರವಾಗಿ ತೇವಾಂಶ ಕಳೆದುಕೊಂಡರೆ ಈ ಪದರ ದುರ್ಬಲವಾಗಬಹುದು. ದುರ್ಬಲವಾದಾಗ ಚರ್ಮ ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಸಣ್ಣ ಬದಲಾವಣೆಗಳಿಗೂ ಪ್ರತಿಕ್ರಿಯೆ ನೀಡಲು ಆರಂಭಿಸುತ್ತದೆ. ಕೆಲವರಿಗೆ ಕೆಂಪು ಚುಕ್ಕೆಗಳು, ಅಲರ್ಜಿ ರೀತಿಯ ಸಮಸ್ಯೆಗಳೂ ಕಾಣಿಸಬಹುದು.
ಇದಲ್ಲದೆ, ಎಸಿ ಕೊಠಡಿಯಲ್ಲಿ ಹೆಚ್ಚು ಸಮಯ ಕಳೆಯುವಾಗ ದೇಹದ ನೀರಿನ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದೆ. ನಾವು ನೀರು ಸರಿಯಾಗಿ ಕುಡಿಯದೇ ಇದ್ದರೆ ಈ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತದೆ.
ಒಳಗಿನಿಂದ ತೇವಾಂಶ ಕಡಿಮೆಯಾದಾಗ ಚರ್ಮಕ್ಕೆ ಹೊರಗಿನಿಂದ ಮಾಯಿಶ್ಚರೈಸರ್ ಹಾಕಿದರೂ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ಹೀಗಾಗಿ ಚರ್ಮ ಒಳಗಿನಿಂದಲೂ ಹೊರಗಿನಿಂದಲೂ ಒಣಗಲು ಆರಂಭಿಸುತ್ತದೆ.
ಎಸಿ ಗಾಳಿಯಿಂದ ಕಾಣಿಸಿಕೊಳ್ಳುವ ಸಾಮಾನ್ಯ ಚರ್ಮ ಸಮಸ್ಯೆಗಳು
ಚರ್ಮ ಒಣಗುವುದು
ಎಸಿ ಗಾಳಿಯಲ್ಲಿರುವವರ ಮುಖ, ಕೈ, ಕಾಲುಗಳ ಬೇಗ ಒಣಗಿದಂತೆ ಆಗುತ್ತದೆ. ಕೆಲವರಿಗೆ ಮೊಣಕಾಲು, ಮಣಿಕಟ್ಟು ಭಾಗದಲ್ಲಿ ಚರ್ಮ ಒಣಗುತ್ತದೆ. ಮುಖದಲ್ಲಿ ಬಿಗಿತ ಹಾಗೂ ಕರಕರೆತನವೂ ಕಾಣಿಸುತ್ತದೆ.
ಚರ್ಮದ ರಕ್ಷಣಾತ್ಮಕ ಪದರ ಹಾನಿ
ಚರ್ಮದ ಮೇಲಿನ ಹೊರಪದರವು ಧೂಳು, ಮಾಲಿನ್ಯ ಮತ್ತು ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ತೇವಾಂಶದ ಕೊರತೆಯಿಂದ ಈ ಪದರ ದುರ್ಬಲವಾಗಿ ಚರ್ಮ ಹೆಚ್ಚು ಸಂವೇದನಾಶೀಲವಾಗುತ್ತದೆ.
ತುರಿಕೆ ಸಮಸ್ಯೆ
ಕೆಲವರಿಗೆ ಎಸಿ ಗಾಳಿಯಲ್ಲಿ ಹೆಚ್ಚು ಸಮಯ ಇದ್ದಾಗ ಚರ್ಮದಲ್ಲಿ ಕೆಂಪು ಕಲೆಗಳು, ಸಣ್ಣ ಗುಳ್ಳೆಗಳು ಅಥವಾ ತೀವ್ರ ತುರಿಕೆ ಕಾಣಿಸಿಕೊಳ್ಳಬಹುದು.
ವಯಸ್ಸಾದಂತೆ ಕಾಣುವ ಚರ್ಮ
ಚರ್ಮದಲ್ಲಿ ತೇವಾಂಶ ಕಡಿಮೆಯಾದರೆ ಅದರ ಶುಷ್ಕತೆ ಕುಗ್ಗುತ್ತದೆ. ಪರಿಣಾಮ ಚರ್ಮದಲ್ಲಿನ ಸೂಕ್ಷ್ಮ ರೇಖೆಗಳು, ಮಡಿಕೆಗಳು ಹಾಗೂ ವಯಸ್ಸಾದಂತೆ ಕಾಣುವ ಲಕ್ಷಣಗಳು ಬೇಗ ಗೋಚರಿಸುತ್ತದೆ.
ಎಸಿ ಬಳಸಿದರೂ ಚರ್ಮವನ್ನು ಹೇಗೆ ಕಾಪಾಡಿಕೊಳ್ಳಬೇಕು?
ಸಾಕಷ್ಟು ನೀರು ಕುಡಿಯಿರಿ
ದೇಹವನ್ನು ಹೈಡ್ರೇಟ್ ಆಗಿ ಇಡುವುದು ಅತ್ಯಂತ ಮುಖ್ಯ. ದಿನಪೂರ್ತಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಮಧ್ಯೆ ಮಧ್ಯೆ ಎಸಿ ಆಫ್ ಮಾಡಿ
ಕೊಠಡಿ ತಂಪಾದ ಬಳಿಕ ಕೆಲಕಾಲ ಎಸಿ ಆಫ್ ಮಾಡಿ ಫ್ಯಾನ್ ಬಳಸುವುದು ಉತ್ತಮ. ಇದು ಚರ್ಮದ ಮೇಲೆ ಒತ್ತಡ ಕಡಿಮೆ ಮಾಡುತ್ತದೆ.
ಮಾಯಿಶ್ಚರೈಸರ್ ಬಳಸಿರಿ
ಮುಖ, ಕೈ ಮತ್ತು ತುಟಿಗಳಿಗೆ ಮಾಯಿಶ್ಚರೈಸರ್, ಹ್ಯಾಂಡ್ ಕ್ರೀಮ್ ಅಥವಾ ಲಿಪ್ ಬಾಮ್ ಬಳಸುವುದನ್ನು ಮರೆಯಬೇಡಿ. ಕೆಲವು ಗಂಟೆಗಳಿಗೊಮ್ಮೆ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯಬಹುದು.
ಹ್ಯೂಮಿಡಿಫೈಯರ್ ಉಪಯೋಗಿಸಿ
ಹ್ಯೂಮಿಡಿಫೈಯರ್ ಕೊಠಡಿಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಸಿ ಬಳಕೆಯಿಂದ ಉಂಟಾಗುವ ಅತಿಯಾದ ಒಣ ವಾತಾವರಣವನ್ನು ಇದು ನಿಯಂತ್ರಿಸುತ್ತದೆ.
ಎಸಿ ಬೇಸಿಗೆಯಲ್ಲಿ ನಿಜಕ್ಕೂ ರಕ್ಷಕ. ಆದರೆ, ಅದರ ಅತಿಯಾದ ಬಳಕೆ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಸರಿಯಾದ ಮುನ್ನೆಚ್ಚರಿಕೆ ಮತ್ತು ಚರ್ಮದ ಆರೈಕೆಯಿಂದ ಎಸಿ ಗಾಳಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.