Winter skincare: ಚಳಿಗಾಲದಲ್ಲೂ ತ್ವಚೆ ಹೊಳೆಯಬೇಕೆ? ಹಾಗಾದ್ರೆ ಈ 5 ತಪ್ಪುಗಳ ಮಾಡಲೇಬೇಡಿ..!
ಈ ಸಮಯದಲ್ಲಿ ತ್ವಚೆಗೆ ಹೆಚ್ಚಿನ ತೇವಾಂಶ ಒದಗಿಸುವ ಮಾಯಿಶ್ಚರೈಸರ್ಗಳನ್ನು ಬಳಸುವುದು ಅಗತ್ಯ. ಆದರೆ, ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೆಯೇ ಚರ್ಮದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.
ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿನ ತಾಪಮಾನ ಮತ್ತು ತೇವಾಂಶದಲ್ಲಿ ಬದಲಾವಣೆಯಾಗುತ್ತದೆ. ಇದರ ಪರಿಣಾಮ ನಮ್ಮ ತ್ವಚೆಯ ಮೇಲೂ ಕಾಣಿಸಿಕೊಳ್ಳುತ್ತದೆ. ತೇವಾಂಶ ಕಡಿಮೆಯಾಗುವುದು, ತಂಪಾದ ಗಾಳಿ ಹಾಗೂ ಮನೆಯೊಳಗಿನ ಹೀಟರ್ಗಳ ಬಳಕೆಯಿಂದ ಚರ್ಮ ಒಣಗುವುದು, ಬಿಗಿಯಾದ ಅನುಭವ ನೀಡುವುದು, ಸುಲಿಯುವುದು ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಸೂಕ್ಷ್ಮವಾಗುವುದು ಕಂಡುಬರುತ್ತದೆ.
ಈ ಸಮಯದಲ್ಲಿ ತ್ವಚೆಗೆ ಹೆಚ್ಚಿನ ತೇವಾಂಶ ಒದಗಿಸುವ ಮಾಯಿಶ್ಚರೈಸರ್ಗಳನ್ನು ಬಳಸುವುದು ಅಗತ್ಯ. ಆದರೆ, ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೆಯೇ ಚರ್ಮದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.
ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಈ ಐದು ಸಾಮಾನ್ಯ ತಪ್ಪುಗಳ ಮಾಡಬೇಡಿ...
1. ಹೆಚ್ಚು ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡುವುದು
ಹೆಚ್ಚು ಚಳಿ ಸಾಮಾನ್ಯವಾಗಿ ಬೆಳ್ಳಂಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಇರುತ್ತದೆ. ಚಳಿ ನೀಗಿಸಲು ಸಾಮಾನ್ಯವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಹಿತವೆನಿಸಬಹುದು. ಆದರೆ, ಹೆಚ್ಚು ಹೊತ್ತು ಬಿಸಿ ನೀರಿಗೆ ಮೈಯೊಡ್ಡುವುದರಿಂದ ಚರ್ಮದಲ್ಲಿರುವ ನೈಸರ್ಗಿಕ ತೈಲಾಂಶ ಕಡಿಮೆಯಾಗುತ್ತದೆ. ಇದರಿಂದ ತ್ವಚೆಯ ರಕ್ಷಣಾತ್ಮಕ ಪದರ ದುರ್ಬಲಗೊಂಡು ಒಣಗುವುದು, ತುರಿಕೆ ಮತ್ತು ಕಿರಿಕಿರಿ ಉಂಟಾಗಬಹುದು.
ಹೀಗಾಗಿ, ಅತಿಯಾದ ಬಿಸಿ ನೀರಿನ ಬದಲು ಉಗುರು ಬೆಚ್ಚಗಿನ ನೀರಿನಲ್ಲಿ ಕಡಿಮೆ ಸಮಯ ಸ್ನಾನ ಮಾಡುವುದು ಉತ್ತಮ. ಸುಗಂಧ ರಹಿತ ಹಾಗೂ ಮೃದುವಾದ ಕ್ಲೆನ್ಸರ್ ಬಳಸಬೇಕು. ಚರ್ಮವನ್ನು ಅತಿಯಾಗಿ ಉಜ್ಜುವುದನ್ನೂ ತಪ್ಪಿಸಬೇಕು. ಸ್ನಾನದ ಬಳಿಕ ಚರ್ಮ ಸ್ವಲ್ಪ ತೇವವಾಗಿರುವಾಗಲೇ ಮಾಯಿಶ್ಚರೈಸರ್ ಹಚ್ಚುವುದರಿಂದ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.
2. ಮಾಯಿಶ್ಚರೈಸರ್ ಬಳಸದೆ ಇರುವುದು
ಬೇಸಿಗೆಯಲ್ಲಿ ಬಳಸುತ್ತಿದ್ದ ಹಗುರವಾದ ಮಾಯಿಶ್ಚರೈಸರ್ ಚಳಿಗಾಲದಲ್ಲಿ ಚರ್ಮಕ್ಕೆ ಸಾಕಷ್ಟು ತೇವಾಂಶ ಒದಗಿಸದಿರಬಹುದು. ತಂಪಾದ ವಾತಾವರಣ ಮತ್ತು ಕಡಿಮೆ ತೇವಾಂಶದಿಂದ ಚರ್ಮದಲ್ಲಿನ ನೀರಿನ ಅಂಶ ವೇಗವಾಗಿ ಕಡಿಮೆಯಾಗಿ ತ್ವಚೆ ನಿರ್ಜಲೀಕರಣಕ್ಕೆ ಒಳಗಾಗಬಹುದು.
ಈ ಸಮಯದಲ್ಲಿ ಸೆರಮೈಡ್ಗಳು, ಗ್ಲಿಸರಿನ್, ಹೈಲುರಾನಿಕ್ ಆಮ್ಲ ಅಥವಾ ಶಿಯಾ ಬಟರ್ ಅಂಶವಿರುವ ತುಸು ದಪ್ಪನೆಯ ಮಾಯಿಶ್ಚರೈಸರ್ ಬಳಸಬಹುದು. ಇವು ಚರ್ಮದ ರಕ್ಷಣಾತ್ಮಕ ಪದರವನ್ನು ಬಲಪಡಿಸಲು ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ಆದರೆ, ಎಲ್ಲರಿಗೂ ಒಂದೇ ರೀತಿಯ ಉತ್ಪನ್ನ ಸೂಕ್ತವಾಗುವುದಿಲ್ಲ. ನಿಮ್ಮ ಚರ್ಮದ ಸ್ವಭಾವಕ್ಕೆ ಹೊಂದುವ ಮಾಯಿಶ್ಚರೈಸರ್ ಆಯ್ಕೆ ಮಾಡುವುದು ಮುಖ್ಯ.
3. ಸನ್ಸ್ಕ್ರೀನ್ ಬಳಸುವುದು ನಿಲ್ಲಿಸುವುದು
ಚಳಿಗಾಲದಲ್ಲಿ ಬಿಸಿಲಿನ ತೀವ್ರತೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಸನ್ಸ್ಕ್ರೀನ್ ಬಳಕೆಯನ್ನು ಹಲವರು ನಿರ್ಲಕ್ಷಿಸುತ್ತಾರೆ. ಆದರೆ, ಸೂರ್ಯನ ನೇರಳಾತೀತ ಕಿರಣಗಳು ವರ್ಷವಿಡೀ ಇರುತ್ತವೆ. ಇವು ಅಕಾಲಿಕ ವಯಸ್ಸಾಗುವಿಕೆ, ಚರ್ಮದ ಮೇಲಿನ ಕಪ್ಪು ಕಲೆಗಳು ಮತ್ತು ತ್ವಚೆಯ ಹಾನಿಗೆ ಕಾರಣವಾಗಬಹುದು.
ಆದ್ದರಿಂದ, ಮೋಡ ಕವಿದ ದಿನಗಳಲ್ಲಿಯೂ ಪ್ರತಿದಿನ ಬೆಳಗ್ಗೆ ಕನಿಷ್ಠ ಎಸ್ಪಿಎಫ್ 30 ಹೊಂದಿರುವ ಬ್ರಾಡ್ ಸ್ಪೆಕ್ಟ್ರಮ್ ಸನ್ಸ್ಕ್ರೀನ್ ಹಚ್ಚಬೇಕು. ಹೆಚ್ಚು ಸಮಯ ಹೊರಗಡೆ ಕಳೆಯುವ ಸಂದರ್ಭಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮತ್ತೆ ಹಚ್ಚುವುದನ್ನು ಮರೆಯಬಾರದು.
4. ಒಣಗಿದ ಚರ್ಮವನ್ನು ಅತಿಯಾಗಿ ಉಜ್ಜುವುದು
ಚಳಿಗಾಲದಲ್ಲಿ ಚರ್ಮ ಸುಲಿಯಲು ಆರಂಭಿಸಿದಾಗ ಅದನ್ನು ತೆಗೆದುಹಾಕಲು ಹಲವರು ಸ್ಕ್ರಬ್ ಅಥವಾ ರಾಸಾಯನಿಕ ಎಕ್ಸ್ಫೋಲಿಯೇಟರ್ಗಳನ್ನು ಬಳಸುತ್ತಾರೆ. ಆದರೆ, ಅತಿಯಾದ ಎಕ್ಸ್ಫೋಲಿಯೇಷನ್ ಈಗಾಗಲೇ ದುರ್ಬಲವಾಗಿರುವ ಚರ್ಮದ ರಕ್ಷಣಾತ್ಮಕ ಪದರಕ್ಕೆ ಮತ್ತಷ್ಟು ಹಾನಿ ಉಂಟುಮಾಡಬಹುದು. ಇದರಿಂದ ಕೆಂಪಾಗುವುದು, ಸೂಕ್ಷ್ಮತೆ ಮತ್ತು ಕಿರಿಕಿರಿ ಹೆಚ್ಚಾಗಬಹುದು.
ಹೀಗಾಗಿ, ಒರಟಾದ ಸ್ಕ್ರಬ್ಗಳನ್ನು ಬಳಸುವುದನ್ನು ತಪ್ಪಿಸಿ. ಚರ್ಮ ಅತಿಯಾಗಿ ಒಣಗಿದ್ದರೆ ರಾಸಾಯನಿಕ ಎಕ್ಸ್ಫೋಲಿಯೇಷನ್ ಬಳಕೆಯನ್ನೂ ಕಡಿಮೆ ಮಾಡಬೇಕು. ಒಣ ಚರ್ಮವನ್ನು ಬಲವಂತವಾಗಿ ಉಜ್ಜಿ ತೆಗೆಯುವ ಬದಲು ಮೃದುವಾದ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಬಳಕೆಗೆ ಆದ್ಯತೆ ನೀಡಬೇಕು.
5. ತುಟಿ, ಕೈ ಮತ್ತು ಪಾದಗಳ ಆರೈಕೆಯನ್ನು ನಿರ್ಲಕ್ಷಿಸುವುದು
ಸಾಮಾನ್ಯವಾಗಿ ತ್ವಚೆಯ ಆರೈಕೆ ಎಂದರೆ ಮುಖದ ಆರೈಕೆಗೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತದೆ. ಆದರೆ, ಚಳಿಗಾಲದಲ್ಲಿ ತುಟಿ, ಕೈ, ಮೊಣಕೈ ಮತ್ತು ಪಾದಗಳ ಚರ್ಮವೂ ಹೆಚ್ಚು ಒಣಗಿ ಒರಟಾಗಬಹುದು. ಕೆಲವೊಮ್ಮೆ ಬಿರುಕುಗಳು ಕಾಣಿಸಿಕೊಳ್ಳಬಹುದು.
ಇದನ್ನು ತಡೆಯಲು ಪೋಷಕಾಂಶಯುಕ್ತ ಲಿಪ್ ಬಾಮ್ ಬಳಸಬೇಕು. ಕೈ ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹಿಮ್ಮಡಿ ಮತ್ತು ಮೊಣಕೈಯಂತಹ ಹೆಚ್ಚು ಒಣಗುವ ಭಾಗಗಳಿಗೆ ದಪ್ಪನೆಯ ಕ್ರೀಮ್ ಹಚ್ಚುವುದು ಉತ್ತಮ. ಮುಖದ ಜೊತೆಗೆ ದೇಹದ ಇತರ ಭಾಗಗಳ ಆರೈಕೆಗೂ ಸಮಾನ ಗಮನ ನೀಡಬೇಕು.
ಚಳಿಗಾಲದಲ್ಲಿ ತ್ವಚೆಯ ಆರೈಕೆಗಾಗಿ ದುಬಾರಿ ಉತ್ಪನ್ನಗಳನ್ನೇ ಬಳಸಬೇಕೆಂದಿಲ್ಲ. ಸರಿಯಾದ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು, ಚರ್ಮದ ಸ್ವಭಾವಕ್ಕೆ ತಕ್ಕ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮತ್ತು ನಿಯಮಿತವಾಗಿ ತೇವಾಂಶ ಕಾಪಾಡಿಕೊಳ್ಳುವುದು ಮುಖ್ಯ. ಈ ಐದು ತಪ್ಪುಗಳನ್ನು ದೂರವಿಟ್ಟರೆ ಚಳಿಗಾಲದಲ್ಲೂ ತ್ವಚೆಯ ಆರೋಗ್ಯ ಮತ್ತು ನೈಸರ್ಗಿಕ ಕಾಂತಿಯನ್ನು ಕಾಪಾಡಿಕೊಳ್ಳಬಹುದು.