ಶಿಫಾರಸುಗಳ ಜಾರಿಗೆ ಕ್ರಮ: ಪ್ರಧಾನಿ
ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ನ್ಯಾ.ಜೆ.ಎಸ್. ವರ್ಮಾ ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಡಾ. ಮನಮೋಹನ್‌ಸಿಂಗ್ ಹೇಳಿದ್ದಾರೆ.
ವರ್ಮಾ ಅವರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಸಿಂಗ್ ಈ ವಿಚಾರ ತಿಳಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ವರ್ಮಾ ಸಮಿತಿಯು 30 ದಿನಗಳೊಳಗಾಗಿ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಸರ್ಕಾರವೂ ಶೀಘ್ರದಲ್ಲೇ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಿದೆ ಎಂದು ಪತ್ರದಲ್ಲಿ ಪ್ರಧಾನಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅತಿ ಕಡಿಮೆ ಅವಧಿಯಲ್ಲಿ ಶಿಫಾರಸು ಸಲ್ಲಿಸಿದ್ದಕ್ಕೆ ವರ್ಮಾ ಸಮಿತಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.
ತ್ವರಿತಗತಿ ವಿಚಾರಣೆ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ರಾಜಕಾರಣಿಗಳನ್ನು ಅನರ್ಹಗೊಳಿಸಬೇಕು ಎಂಬ ವರ್ಮಾ ಸಮಿತಿಯ ಶಿಫಾರಸನ್ನು ಒಪ್ಪಲು ಸರ್ಕಾರ ನಿರಾಕರಿಸಿತ್ತು. ಆದರೆ, ಅಂತಹ ಪ್ರಕರಣಗಳನ್ನು ತ್ವರಿತಗತಿ ವಿಚಾರಣೆ ನಡೆಸಬೇಕು ಹಾಗೂ 18 ತಿಂಗಳೊಳಗಾಗಿ ತೀರ್ಪು ಪ್ರಕಟವಾಗಬೇಕು ಎಂಬ ಇಚ್ಛೆಯನ್ನು ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ವ್ಯಕ್ತಪಡಿಸಿದ್ದಾರೆ.
27 ಪ್ರಕರಣ ಇತ್ಯರ್ಥ: ಜನವರಿ ಆರಂಭದಲ್ಲಿ ದೆಹಲಿಯಲ್ಲಿ ಆರಂಭವಾದ 6 ತ್ವರಿತಗತಿ ನ್ಯಾಯಾಲಯಗಳು ಈವರೆಗೆ 500ರಲ್ಲಿ 27 ಪ್ರಕರಣಗಳ ತೀರ್ಪು ನೀಡಿವೆ. ಇವುಗಳಲ್ಲಿ 12 ಪ್ರಕರಣಗಳಿಗೆ ಸಂಬಂಧಿಸಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, 15ರಲ್ಲಿ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.