ಲಂಕಾ ವಿರುದ್ಧ ಭಾರತ ಮತ
ಜಿನೇವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಶ್ರೀಲಂಕಾ ವಿರುದ್ಧ ಅಮೆರಿಕ ಮಂಡಿಸಿದ ನಿರ್ಣಯಕ್ಕೆ ಗೆಲುವಾಗಿದೆ.
ಭಾರತ ಕೂಡ ಅಮೆರಿಕ ಪ್ರಾಯೋಜಿತ ನಿರ್ಣಯದ ಪರ ಮತ ಹಾಕಿದೆ. ಆದರೆ ಪಾಕಿಸ್ತಾನ ನಿರ್ಣಯದ ವಿರುದ್ಧ ಮತ ಹಾಕಿದೆ. ಯುಎನ್ಎಚ್ಆರ್ಸಿಯ 47 ರಾಷ್ಟ್ರಗಳ ಪೈಕಿ 24 ರಾಷ್ಟ್ರಗಳು ನಿರ್ಣಯದ ಪರ ಮತಹಾಕಿದವು. 13 ರಾಷ್ಟ್ರಗಳು ವಿರೋಧಿಸಿ ಮತಹಾಕಿದರೆ, 8 ರಾಷ್ಟ್ರಗಳು ಮತದಾನದಿಂದ ದೂರವೇ ಉಳಿದವು. ಅಮೆರಿಕದ ಈ ನಿರ್ಣಯದಲ್ಲಿ ಶ್ರೀಲಂಕಾವು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದೆ. ಇದ್ದಕ್ಕಿದ್ದಂತೆ ಕಾಣೆಯಾಗುವುದು, ಕಾನೂನಿನ ಹೊರತಾಗಿ ಹತ್ಯೆ, ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವಿಕೆ, ಹಿಂಸೆ, ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರ ಮೇಲೆ ದೌರ್ಜನ್ಯ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಪ್ರತಿನಿಧಿಗಳಿಗೆ ಬೆದರಿಕೆ ಹಾಕುತ್ತಿದೆ. ಇದನ್ನು ನಿಲ್ಲಿಸಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ಸ್ವತಂತ್ರ ಮತ್ತು ನಂಬಿಕಸ್ತ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗಿದೆ.
ಭಾರತ ಕೂಡ ಈ ನಿರ್ಣಯದ ಜೊತೆ ತಿದ್ದುಪಡಿ ನಿರ್ಣಯ ಮಂಡಿಸಲು ಚಿಂತನೆ ನಡೆಸಿತ್ತು. ಇದರಲ್ಲಿ ಕೆಲ ಕಠಿಣ ಕ್ರಮಗಳ ಬಗ್ಗೆ ಉಲ್ಲೇಖಿಸಲು ನಿರ್ಧರಿಸಿತ್ತು. ಆದರೆ ನಿರ್ಣಯದ ವಿರುದ್ಧ ಮತ ಬಿದ್ದರೆ ಕಷ್ಟ ಎಂದು ತಿದ್ದುಪಡಿ ನಿರ್ಣಯ ಮಂಡನೆಯಿಂದ ಹಿಂದೆ ಸರಿಯಿತು.
ಇದೇ ವೇಳೆ ಭಾರತ ನಿರ್ಣಯದ ಪರ ಮತ ಹಾಕಿರುವುದನ್ನು ಬಿಜೆಪಿ ವಿರೋಧಿಸಿದೆ. ಶ್ರೀಲಂಕಾ ಸೇನೆ ಹಿಂಸೆ ಮಾಡುತ್ತಿದ್ದಾಗ ಭಾರತ ಸುಮ್ಮನಿತ್ತು. ಆದರೆ ಈಗ ಕೇಂದ್ರ ಸರ್ಕಾರ ಗದ್ದಲವೆಬ್ಬಿಸುತ್ತಿದೆ. ಶ್ರೀಲಂಕಾ ಸುಮ್ಮನಿದೆ ಎಂದು ವೆಂಕಯ್ಯ ನಾಯ್ಡು ವ್ಯಂಗ್ಯವಾಡಿದ್ದಾರೆ.
ಲಂಕಾ ಕೂಡ ಭಾರತ ತನ್ನ ವಿರೋಧವಾಗಿ ಮತ ಹಾಕಿರುವುದರ ಬಗ್ಗೆ ಮೃದುವಾಗಿಯೇ ಮಾತನಾಡಿದೆ. ಭಾರತ ಕೆಲ ಆಂತರಿಕ ರಾಜಕೀಯ ನೀತಿಗಳಿಂದಾಗಿ ನಮ್ಮ ವಿರುದ್ಧ ಮತಹಾಕಿದೆ ಎಂದಿದೆ.
ಡಿಎಂಕೆ, ಎಐಎಡಿಎಂಕೆ ಆಕ್ರೋಶ
ವಿಶ್ವಸಂಸ್ಥೆಯಲ್ಲಿನ ಈ ನಿರ್ಣಯಕ್ಕೆ ಡಿಎಂಕೆ ಮತ್ತು ಎಐಎಡಿಎಂಕೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ನಿರ್ಣಯ ತೀರಾ ನಿಸ್ಸಾರವಾಗಿದೆ ಎಂದು ಆರೋಪಿಸಿವೆ. ಪ್ರಬಲವಾದ ನಿರ್ಣಯ ಮಂಡಿಸುವಲ್ಲಿ ಭಾರತ ಸರ್ಕಾರ ಯಾವುದೇ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಟೀಕಿಸಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.