ನವದೆಹಲಿ: 'ಹೇಳೋದು ಆಚಾರ, ತಿನ್ನೋದು ಬದನೇ ಕಾಯಿ' ಎಂಬ ನಾಣ್ಣುಡಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಾಲಿಗೆ ಸತ್ಯವಾಗಿದೆ. ಹಿಂದೆ ಯುಪಿಎ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದ್ದ ಕುಲಾಂತರಿ ತಳಿ ತಂತ್ರಜ್ಞಾನದ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿ, ಈಗ ಅದನ್ನೇ ಅಪ್ಪಿಕೊಳ್ಳಲು ಮುಂದಾಗಿದೆ. ಹಿಂದೆ, ಪ್ರತಿಪಕ್ಷದಲ್ಲಿದ್ದಾಗ ಇದೇ ತಂತ್ರಜ್ಞಾನದ ವಿರುದ್ಧ ಬೊಬ್ಬೆ ಹೊಡೆದಿದ್ದ ಕೇಸರಿ ಪಕ್ಷ, ಈಗ ತಾನು ಅಧಿಕಾರಕ್ಕೆ ಬಂದ ಮೇಲೆ ಕುಲಾಂತರಿ ಬೆಳೆಗಳಿಂದ ಯಾವುದೇ ಹಾನಿಯಿಲ್ಲ ಎಂದು ಹೇಳಿದೆ ೊ.
12 ಕುಲಾಂತರಿ ಬೆಳೆಗಳ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲು ಜೆನೆಟಿಕ್ ಎಂಜಿನಿಯರಿಂಗ್ ಅಪ್‌ರೈಸಿಂಗ್ ಸಮಿತಿ (ಜಿಇಎಸಿ) ಯು ಅನುಮತಿ ನೀಡಿದ್ದನ್ನು ರಾಜ್ಯ ಸಭೆಯಲ್ಲಿ ಗುರುವಾರ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕುಲಾಂತರಿ ತಳಿಗಳಿಂದಾಗಿ ಮಣ್ಣು , ಪರಿಸರ ಅಥವಾ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವ ಬಗ್ಗೆ ಯಾವುದೇ ವೈಜ್ಞಾಕ ಕಾರಣಗಳು ಈವರೆಗೆ ಸಿಕ್ಕಿಲ್ಲ. ಅಲ್ಲದೆ, ಕುಲಾಂತರಿ ಬೆಳೆಗಳು ಸಾಂಪ್ರದಾಯಿಕ ತಳಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಕ್ರಿಮಿ, ಕಳೆ, ಹವಾಮಾನ ವೈಪರೀತ್ಯ, ಮಣ್ಣಿನಲ್ಲಿನ ಲೋಪದೋಷಗಳು, ಬರ ಮುಂತಾದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದುತ್ತವೆ. ಅಲ್ಲದೆ ಇಳುವರಿಯೂ ಹೆಚ್ಚಿರುತ್ತದೆ'ಎಂದಿದ್ದಾರೆ.
ಆಗ ವಿರೋಧ
ನಾಲ್ಕು ವರ್ಷಗಳ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರ ಬಿಟಿ ಬದನೆಕಾಯಿ ಕೃಷಿಗೆ ಹೆಚ್ಚಿನ ಮಹತ್ವ ನೀಡಿತ್ತು. ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ, ಇದರ ವಿರುದ್ಧ ದೇಶಾದ್ಯಂತ ಆಂದೋಲನವನ್ನೇ ಕೈಗೊಂಡಿತ್ತು. ಯುಪಿಎ ವಿರುದ್ಧ ಸಮರ ಸಾರಿತ್ತು. ತನ್ನ ಆಂದೋಲನಕ್ಕೆ 'ಸ್ವದೇಶ', ಸ್ವಾಭಿಮಾನ ಎಂಬ ಭಾವನೆಗಳನ್ನು ಲೇಪಿಸಿತ್ತು. 'ಸ್ವದೇಶಜಾಗರಣಾಮಂಚ್' ಹಾಗೂ ಆರೆಸ್ಸೆಸ್ಸ್‌ನ ಮಾರ್ಗದರ್ಶನದಲ್ಲಿ ಉಗ್ರ ಸ್ವರೂಪ ಪಡೆದುಕೊಂಡ ಈ ಆಂದೋಲನ, ದೇಶೀಯ ತಳಿಗಳನ್ನು ಉಳಿಸಬೇಕು, ಮುಂದಿನ ಪೀಳಿಗೆಗೆ ಅವು ಲಭ್ಯವಾಗುವಂತಾಗಬೇಕು. ಹಾಗಾಗಿ, ಬಿಟಿ ಬದನೆ ಸೇರಿದಂತೆ ಯಾವುದೇ ಕುಲಾಂತರಿ ತಳಿಗಳಿಗೆ ಅವಕಾಶ ನೀಡಬಾರದು' ಎಂದು ಯುಪಿಎ ಸರ್ಕಾರವನ್ನು ಆಗ್ರಹಿಸಿತ್ತು. ರೈತರೂ ಬಿಜೆಪಿಯ ಈ ನಿಲುವಿಗೆ ಮಾರು ಹೋದರು. ಹಾಗಾಗಿ, ಕೇಂದ್ರದ ಮೇಲೆ ಒತ್ತಡ ಹೆಚ್ಚಿ, ಕುಲಾಂತರಿ ಬೆಳೆಗಳ ಬಗೆಗಿನ ಸಂಶೋಧನೆ ಹಾಗೂ ಪ್ರಯೋಗಗಳ ಅನುಷ್ಠಾನಗಳಿಗೆ ಹಿನ್ನೆಡೆ ಉಂಟಾಗಿತ್ತು.