ದೇಶ

ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿ ಬೃಹತ್ ಪ್ರತಿಭಟನೆ

Srinivasamurthy VN

ನವದೆಹಲಿ: ಶರದಾ ಹಗರಣದ ಸಂಬಂಧ ಪಶ್ಚಿಮ ಬಂಗಾಳ ಸಚಿವ ಮದನ್ ಮಿತ್ರಾ ಅವರ ಬಂಧನ ವಿರೋಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಈ ಬಗ್ಗೆ ಕಳೆದ ಶನಿವಾರ ಟಿಎಂಸಿ ಪ್ರತಿಭಟನೆ ನಡೆಸಿದ್ದು, ಸೋಮವಾರ ಕೂಡ ನವದೆಹಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸಂಸತ್ ಭವನದ ಆವರಣದಲ್ಲಿ ಸಾವಿರಾರು ಟಿಎಂಸಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ 1ಗಂಟೆಗೆ 'ಮಹಾ ಮಿಚ್ಚಿಲಿ' ಎಂಬ ಹೆಸರಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅತ್ತ ನವದೆಹಲಿಯಲ್ಲಿ ಕಾರ್ಯಕರ್ತರು ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಕೊಲ್ಕತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ನಿವಾಸದ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮದನ್ ಮಿತ್ರಾ ಅವರ ಬಂಧನದ ಹಿಂದೆ ಬಿಜೆಪಿ ಸರ್ಕಾರದ ಕೈವಾಡವಿದ್ದು, ಟಿಎಂಸಿ ಪಕ್ಷದ ರಾಜಕೀಯ ಏಳಿಗೆಯನ್ನು ಸಹಿಸಿಕೊಳ್ಳದ ಬಿಜೆಪಿ ಮುಖಂಡರು ಸಿಬಿಐ ಮುಖಾಂತರವಾಗಿ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ನವದೆಹಲಿಯನ್ನು ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನವನ್ನು ಗುರಿಯಾಗಿಸಿಕೊಂಡು ಟಿಎಂಸಿ ಕಾರ್ಯಕರ್ತರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಸಂಸತ್ಗೆ ಮುತ್ತಿಗೆ ಹಾಕಲು ಕೂಡ ನಿರ್ಧರಿಸಲಾಗಿದೆ.

ಒಟ್ಟಾರೆ ತಮ್ಮ ಆಪ್ತರಲ್ಲಿ ಒಬ್ಬರಾದ ಮದನ್ ಮಿತ್ರಾ ಅವರ ಬಂಧನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ಮೂಲಕ ಕೇಂದ್ರಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT