ಮುಂಬೈ: ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ಮಾಡುವ ದೈಹಿಕ ಸಂಪರ್ಕಗಳೆಲ್ಲವೂ ಅತ್ಯಾಚಾರವಾಗುವುದಿಲ್ಲ ಎಂದು ಮುಂಬೈ ಹೈ ಕೋರ್ಟ್ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ, 'ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ಎಲ್ಲ ಪ್ರಕರಣಗಳೂ ಅತ್ಯಾಚಾರವಾಗುವುದಿಲ್ಲ. ದೊಡ್ಡ ನಗರಗಳಲ್ಲಿ ವಿವಾಹ ಪೂರ್ವ ದೈಹಿಕ ಸಂಪರ್ಕ ಸಾಮಾನ್ಯವಾಗಿ ಹೋಗಿದ್ದು, ಅದರಿಂದ ಶಾಕ್ ಆಗುವ ಅಗತ್ಯವಿಲ್ಲ' ಎಂದು ಹೇಳಿದೆ.
'ಯುವಕ ಮತ್ತು ಯುವತಿಯ ಸ್ನೇಹದಲ್ಲಿ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವುದು ದೊಡ್ಡ ವಿಷಯವೇನಲ್ಲ. ಅಥವಾ ಮದುವೆಗೆ ಮುನ್ನವೇ ಸೆಕ್ಸ್ ಮಾಡುವುದೂ ಅಚ್ಚರಿಯ ವಿಷಯವೇನಲ್ಲ. ಪ್ರಸ್ತುತ ಇಬ್ಬರ ನಡುವೆ ಒಲಿವಿದ್ದಾಗ ಇಬ್ಬರೂ ಒಟ್ಟಿಗೆ ಇರಬಹುದು. ಮುಂದೆ ಇಬ್ಬರ ನಡುವಿನ ಸಂಬಂಧ ಹಳಸಿದಾಗ ಇಬ್ಬರು ಬೇರೆಯಾಗಬೇಕು ಎಂಬ ಅಭಿಪ್ರಾಯ ಬರಬಹುದು. ಹೀಗಾಗಿ ಇಂತಹ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಂತೆಯೇ ಈ ಹಿಂದೆ ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಮದುವೆಗೆ ಒತ್ತಾಯಿಸುವುದು ಸರಿಯಲ್ಲ. ಹಾಗೆಯೇ ಎಲ್ಲ ಪ್ರಕರಣಗಳಿಗೂ ಒಂದೇ ಸೂತ್ರವನ್ನು ಅಳವಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ..?
ಸೀಮಾ ದೇಶ್‌ಮುಖ್ ಎಂಬ ಮಹಿಳೆಯು, ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕವಿರಿಸಿಕೊಂಡು ಇದೀಗ ಮೊಸ ಮಾಡಿದ್ದಾನೆ ಎಂದು ಆರೋಪಿಸಿ ರಾಹುಲ್ ಪಾಟೀಲ್ ಎಂಬಾತನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಳು. ವೃತ್ತಿಯಲ್ಲಿ ವಕೀಲನಾಗಿರುವ ರಾಹುಲ್ ಪಾಟೀಲ್ 1999ರಿಂದಲೂ ಸೀಮಾಳಿಗೆ ಪರಿಚಿತನಾಗಿದ್ದು, 2006ರಿಂದ ಇಬ್ಬರೂ ದೈಹಿಕ ಸಂಪರ್ಕವನ್ನು ಇಟ್ಟುಕೊಂಡಿದ್ದರಂತೆ. ಈ ವೇಳೆ ರಾಹುಲ್ ಸೀಮಾಳನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. 2009ರಲ್ಲಿ ರಾಹುಲ್ ಸೀಮಾಳನ್ನು ವಿವಾಹವಾಗುವುದಿಲ್ಲ ಎಂದು ಹೇಳಿದಾಗ ಸೀಮಾ ಆತ್ಮಹತ್ಯೆಗೆ ಯತ್ನಿಸಿದ್ದಳು.
ಬಳಿಕವೂ ಕೂಡ ಸೀಮಾ ಮತ್ತು ರಾಹುಲ್ ನಡುವಿನ ದೈಹಿಕ ಸಂಪರ್ಕ ಮುಂದುವರೆದಿತ್ತು. ಈ ವೇಳೆ ಸೀಮಾ ಗರ್ಭವತಿಯಾಗಿದ್ದು, ರಾಹುಲ್ ಬೇರೊಬ್ಬ ಯುವತಿಯೊಂದಿಗೆ ವಿವಾಹವಾಗಿದ್ದ. ಈ ಬಗ್ಗೆ ಸೀಮಾ ನ್ಯಾಯಾಲಯದಲ್ಲಿ ಅತ್ಯಾಚಾರ ಮತ್ತು ವಂಚನೆ ದೂರು ಸಲ್ಲಿಕೆ ಮಾಡಿದ್ದಳು. ಆದರೆ ರಾಹುಲ್ ಹೇಳುವಂತೆ ತಾವಿಬ್ಬರೂ ಪರಸ್ಪರ ಸಮ್ಮತಿ ಮೇರೆಗೆ ದೈಹಿಕ ಸಂಪರ್ಕವಿರಿಸಿಕೊಂಡಿದ್ದು, ಇಬ್ಬರ ಜಾತಿ ಬೇರೆಯಾದ್ದರಿಂದ ಕುಟುಂಬದವರು ನಮ್ಮ ಮದುವೆಗೆ ಒಪ್ಪಲಿಲ್ಲ. ಹೀಗಾಗಿ ನಾನು ಬೇರೆ ಮದುವೆಯಾದೆ ಎಂದು ಹೇಳಿದ್ದಾನೆ.
ಒಟ್ಟಾರೆ ವಿವಾಹ ಪೂರ್ವ ಲೈಂಗಿಕ ಸಂಪರ್ಕ ಕುರಿತಂತೆ ಬಾಂಬೇ ಹೈಕೋರ್ಟ್ ನೀಡಿರುವ ತೀರ್ಪು ಇದೀಗ ಚರ್ಚೆಗೆ ಗ್ರಾಸವಾಗಿದೆ.