ದೇಶ

2ಜಿ: ಹೋಗಿ ನಿಮ್ ಕೆಲ್ಸನೋಡ್ಕೊಳ್ಳಿ; ಸಿಬಿಐಗೆ ಸುಪ್ರೀಂ ತಾಕೀತು

Lingaraj Badiger

ನವದೆಹಲಿ: 2ಜಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, 'ಕೋರ್ಟ್ ಹಾಲ್ನಿಂದ ಹೋಗಿ, ನಿಮ್ಮ ಕೆಲಸ ನೋಡ್ಕೊಳ್ಳಿ' ಎಂದು ತಾಕೀತು ಮಾಡಿತು.

ಸಿಬಿಐ ಮುಖ್ಯಸ್ಥರು 2ಜಿ ಹಗರಣದ ಆರೋಪಿಗಳನ್ನು ಭೇಟಿ ಮಾಡಿದ ಪ್ರಕರಣ ಸಂಬಂಧ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಇಂದು ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ನಿರ್ದೇಶಕರ ಬದಲು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬಂದಿದ್ದರಿಂದ ಗರಂ ಆದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು, ಈ ಕೂಡಲೇ ಎಲ್ಲರೂ ಕೋರ್ಟ್ ಆವರಣ ತೊರೆಯುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ, ಅವರೆಲ್ಲಾ ಕಡತಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಕೋರ್ಟ್ಗೆ ಆಗಮಿಸಿದ್ದಾರೆ ಎಂದು ಸಿಬಿಐ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ಸಮಜಾಯಿಸಿ ನೀಡಲು ಮುಂದಾದರು. ಇದಕ್ಕೆ ಒಪ್ಪದ ನ್ಯಾಯಮೂರ್ತಿ ದತ್ತು, 'ನಾವು ಅವರನ್ನು ಇಲ್ಲಿಗೆ ಕರೆದಿಲ್ಲ. ನಮಗೆ ವಿವರಣೆಯ ಅಗತ್ಯ ಬಿದ್ದಾಗ ಕರೆಯುತ್ತೇವೆ' ಎಂದರು.

ಇದೇ ವೇಳೆ ಸಿನ್ಹಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಮಂಡಿಸಲು ಮುಂದಾದ ಸಿಬಿಐ ಜಂಟಿ ನಿರ್ದೇಶಕ ಅಶೋಕ್ ತಿವಾರಿ ಅವರನ್ನೂ ತರಾಟೆಗೆ ತೆಗೆದುಕೊಂಡ ಕೋರ್ಟ್, ನೀವು ರಂಜಿತ ಸಿನ್ಹಾ ವಕ್ತಾರರಂತೆ ವರ್ತಿಸಬೇಡಿ ಎಂದು ಎಚ್ಚರಿಸಿತು.

2ಜಿ ಮತ್ತು ಕಲ್ಲಿದ್ದಲು ಹಗಣಗಳಲ್ಲಿ ಭಾಗಿಯಾದವರು ಸಿಬಿಐ ನಿರ್ದೇಶಕರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ನ್ಯಾಯಾವಾದಿ ಪ್ರಶಾಂತ್ ಭೂಷಣ್ ಅವರು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಇಂದು ವಾದ-ಪ್ರತಿವಾದ ನಡೆಯಿತು.

SCROLL FOR NEXT