ನವದೆಹಲಿ: ಪಾಕಿಸ್ತಾನದಿಂದ ಬಂದ ಆದೇಶದಂತೆ ತಾನು ಭಾರತದಲ್ಲಿ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದೆ ಎಂದು ಶಂಕಿತ ಐಎಸ್‌ಐ ಏಜೆಂಟ್ ಹೇಳಿದ್ದಾನೆ.
ಕಳೆದ ಏಪ್ರಿಲ್‌ನಲ್ಲಿ ಚೆನ್ನೈನಲ್ಲಿ ಶಂಕೆಯ ಮೇರೆಗೆ ಬಂಧನಕ್ಕೀಡಾಗಿದ್ದ ಶ್ರೀಲಂಕಾ ಮೂಲದ ಜಹೀರ್ ಹುಸೇನ್ ಎಂಬ ಶಂಕಿತ ಐಎಸ್‌ಐ ಏಜೆಂಟ್ ನ್ಯಾಯಾಲಯದ ಮುಂದೆ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಚೆನ್ನೈನ ಪೂನಮಲ್ಲಿ ವಿಶೇಷ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಹುಸ್ಸೇನ್ ಪಾಕಿಸ್ತಾನದಿಂದ ಬಂದ ಆದೇಶದನ್ವಯ ನಾನು ಭಾರತದಲ್ಲಿ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದೆ. ಭಾರತದ ಅರ್ಥ ವ್ಯವಸ್ಥೆಯನ್ನು ಹಾಳುಗೆಡವುವ ಉದ್ದೇಶದಿಂದಾಗಿ ಪಾಕಿಸ್ತಾನದ ಅಧಿಕಾರಿಗಳಾದ ಅಮಿರ್ ಜುಬೇರ್ ಸಿದ್ದಿಕಿ, ಬೋಸ್ ಅಲಿಯಾಸ್ ಶಾ ಅವರ ನಿರ್ದೇಶನದಂತೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
'ಶ್ರೀಲಂಕಾದ ಕೊಲಂಬೊದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳಿಂದ ಬಂದ ಆದೇಶದ ಹಿನ್ನಲೆಯಲ್ಲಿ ನಾನು ಭಾರತದಲ್ಲಿ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದೆ ಎಂದು ಜಹೀರ್ ಹುಸ್ಸೇನ್ ಹೇಳಿದ್ದಾನೆ. ಇದೇ ಹುಸ್ಸೇನ್ ಈ ಹಿಂದಿನ ವಿಚಾರಣೆ ವೇಳೆ ತಾನೊಬ್ಬ ವ್ಯಾಪಾರಿಯಾಗಿದ್ದು, ವಸ್ತುಗಳನ್ನು ಖರೀದಿಸಲು ಭಾರತಕ್ಕೆ ಆಗಮಿಸಿದ್ದೆ' ಎಂದು ಹೇಳಿಕೆ ನೀಡಿದ್ದನು.
ಆದರೆ ಸತತ ಪೊಲೀಸ್ ವಿಚಾರಣೆ ಬಳಿಕ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಹುಸ್ಸೇನ್ ತಾನು ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳ ಆದೇಶದ ಮೇರೆಗೆ ಖೋಟಾನೋಟು ಚಲಾವಣೆ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಕಳೆದ ಏಪ್ರಿಲ್‌ನಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದ ಚೆನ್ನೈ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ಶ್ರೀಲಂಕಾ ಮೂಲದ ಜಹೀರ್ ಹುಸೇನ್, ಮಹಮದ್ ಸಲೀಂ, ಶಿವ ಬಾಲನ್ ಎಂಬ ಮೂವರನ್ನು ಬಂಧನಕ್ಕೊಳಪಡಿಸಿದ್ದರು. ಶಿವ ಬಾಲನ್ ಮತ್ತು ಮಹಮದ್ ಸಲೀಂ ಅವರು ತಮ್ಮ ಆರೋಪವನ್ನು ತಿರಸ್ಕರಿಸಿದ್ದು, ನ್ಯಾಯಾಧೀಶರ ಪ್ರಯೋಗಿಸಿದ ಉಪಾಯದಿಂದ ಹುಸ್ಸೇನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.