ನ್ಯೂಯಾರ್ಕ್: ಮಂಗಳನನ್ನು ಮೊದಲಿಗೆ ಸ್ಪರ್ಶಿಸಿದ್ದು ವೈಕಿಂಗ್ ಮಾರ್ಸ್ ಲ್ಯಾಂಡರ್(1979) ಅಲ್ಲ. ವೈಕಿಂಗ್ ಅಲ್ಲಿಗೆ ತಲುಪುವಷ್ಟರಲ್ಲೇ ಮಂಗಳನ ನೆಲದಲ್ಲಿ ಇಬ್ಬರು ನಡೆದಾಡುತ್ತಿದ್ದುದನ್ನು ನಾನು ನೋಡಿದ್ದೇನೆ!
ಇಂಥ ಕೌತುಕವನ್ನು ನಾಸಾದ ಮಾಜಿ ಉದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅಮೆರಿಕನ್ ರೇಡಿಯೋಗೆ ಕರೆ ಮಾಡಿರುವ ಜಾಕಿ ಎಂಬುವರು ಈ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲೇ ಸಂಚಲನ ಸೃಷ್ಟಿಸಿದ್ದಾರೆ. ಜಾಕಿ ಹೇಳಿಕೆ ನಿಜವೇ ಆಗಿದ್ದರೆ ನಾಸಾ ಇದನ್ನು ಮುಚ್ಚಿಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ.
27 ವರ್ಷಗಳಿಂದ: ಕಳೆದ 27 ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಈ ವಿಸ್ಮಯ ಹೊರಹಾಕಲೇಬೇಕೆಂದು ನಿರ್ಧರಿಸಿ ಬಾಯಿಬಿಡುತ್ತಿದ್ದೇನೆ ಎಂದಿದ್ದಾರೆ ಜಾಕಿ. ನಾನು ವೈಕಿಂಗ್ ಲ್ಯಾಂಡರ್ನ ಡೌನ್ಲಿಂಕ್ ಟೆಲಿಮೆಟ್ರಿಯನ್ನು ನಿರ್ವಹಿಸುತ್ತಿದ್ದೆ. ಆಗ ನನ್ನ ಜತೆ ಇನ್ನೂ 6 ಸಹೋದ್ಯೋಗಿಗಳಿದ್ದರು. ವೈಕಿಂಗ್ ಮಂಗಳನ ಅಂಗಳದಲ್ಲಿ ಇಳಿಯುತ್ತಿದ್ದಂತೆ, ಕೆಂಪು ಗ್ರಹದಲ್ಲಿ ಇಬ್ಬರು ವ್ಯಕ್ತಿಗಳು ನಡೆದಾಡುತ್ತಿದ್ದರು. ಅವರು ಸ್ಪೇಸ್ ಸೂಟ್ಗಳನ್ನೇ ಧರಿಸಿದ್ದರು. ಆದರೆ ಅದು ನಾವು ಬಳಸುವಷ್ಟು ದಪ್ಪಗಿರಲಿಲ್ಲ ಹಾಗೂ ಗಗನಯಾತ್ರಿಗಳ ಉಡುಗೆಯಾಗಿರಲಿಲ್ಲ. ವೈಕಿಂಗ್ ಅನ್ನು ನೋಡುತ್ತಿದ್ದಂತೆ ಅವರು ಅದರತ್ತ ಚಲಿಸತೊಡಗಿದರು. ನಂತರ ಅವರು ನಮ್ಮ ವಿಡಿಯೋ ಫೀಡ್ ಅನ್ನು ಕತ್ತರಿಸಿದ್ದರು ಎಂದಿದ್ದಾರೆ ಜಾಕಿ.