ದೇಶ

ನ್ಯಾಯಾಧೀಶರ ಸಮ್ಮೇಳನಕ್ಕೆ ಆಕ್ಷೇಪ: ಪ್ರಧಾನಿಗೆ ಸುಪ್ರೀಂ ಕೋರ್ಟ್ ಜಡ್ಜ್ ಪತ್ರ

Lingaraj Badiger

ನವದೆಹಲಿ: ವಿವಾದದ ನಡುವೆಯೂ ಶುಕ್ರವಾರ ಆರಂಭವಾಗಿರುವ ಮುಖ್ಯ ನ್ಯಾಯಾಧೀಶರ ಸಮ್ಮೇಳನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನ್ಯಾ. ಕುರಿಯನ್ ಜೋಸೆಫ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಶನಿವಾರ ಕರೆದಿರುವ ನ್ಯಾಯಾಧೀಶರ ಔತಣಕೂಟದ ಆಹ್ವಾನವನ್ನು ಜೋಸೆಫ್ ತಿರಸ್ಕರಿಸಿದ್ದಾರೆ.

ಗುಡ್‌ಫ್ರೈಡೆಯಿಂದ ಈಸ್ಟರ್ನ್ ಸಂಡೆವರೆಗಿನ ಮೂರು ದಿನಗಳು ಕ್ರಿಶ್ಚಿಯನ್ನರಿಗೆ ಪವಿತ್ರವಾದುದು. ಇದೇ ಅವಧಿಯಲ್ಲಿ ಮುಖ್ಯ ನ್ಯಾಯಾಧೀಶರ ಸಮ್ಮೇಳನ ಹಮ್ಮಿಕೊಂಡಿರುವುದಕ್ಕೆ ಈ ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದ ಕುರಿಯನ್ ಜೋಸೆಫ್, ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿಗೆ ಪತ್ರ ಬರೆದಿದ್ದರು.

ಜೋಸೆಫ್ ಪತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ದತ್ತು, ಈ ವಿಚಾರದ ಬಗ್ಗೆ ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ, ನೀವು ಒತ್ತು ಕೊಡಬೇಕಾದದ್ದು ಸ್ವಹಿತಾಸಕ್ತಿಗೋ, ಸಾಂಸ್ಥಿಕ ಹಿತಾಸಕ್ತಿಗೋ ಎಂಬುದನ್ನು ನೀವೇ ನಿರ್ಧರಿಸಬೇಕು. ನಿಮಗೆ ಧಾರ್ಮಿಕ ಕಾರ್ಯಕ್ರಮವೇ ಮುಖ್ಯವೆಂದಾದರೆ ನಿಮ್ಮ ಕುಟುಂಬ ಸದಸ್ಯರನ್ನು ದೆಹಲಿಗೆ ಬರಲು ಹೇಳಿ. ಹಲವು ನ್ಯಾಯಮೂರ್ತಿಗಳು ತಮ್ಮ ಕುಟುಂಬವನ್ನು ಬಿಟ್ಟು ದೂರದೂರಿನಿಂದ ಇಲ್ಲಿ ಬಂದಿಲ್ಲವೇ ಎಂದು ಪ್ರಶ್ನಿಸಿದ್ದರು.

ಇದೀಗ ಪ್ರಧಾನಿಗೆ ಪತ್ರ ಬರೆದಿರುವ ಜೋಸೆಫ್, ಪ್ರಮುಖ ಧಾರ್ಮಿಕ ರಜಾ ದಿನಗಳಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ. ನಾನು ನನ್ನ ಧರ್ಮದ ಬಗ್ಗೆ ಮಾತ್ರ ಹೇಳುತ್ತಿಲ್ಲ. ಎಲ್ಲ ಧರ್ಮಗಳ ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ ಇಂಥಹ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

SCROLL FOR NEXT