ನವದೆಹಲಿ: 'ರೈತರ ಜೀವ ತುಂಬಾ ಅಮೂಲ್ಯವಾದದ್ದು, ಅವರ ಜೀವಕ್ಕೆ ಬೆಲೆ ಕಟ್ಟಲಾಗದು ಮತ್ತು ಮನುಷ್ಯನ ಜೀವನಕ್ಕಿಂತ ಯಾವುದು ದೊಡ್ಡದಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿಯ ವೇಳೆ ರೈತ ಮೃತಪಟ್ಟ ಘಟನೆಯ ಬಗ್ಗೆ ಮಾತನಾಡಿದ ಮೋದಿ, ರೈತನ ಆತ್ಮಹತ್ಯೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ವಿಷಯ ತುಂಬಾ ಹಳೆಯ ಮತ್ತು ಗಂಭೀರ ವಿಷಯ. ಈ ಸಮಸ್ಯೆಗೆ ಉತ್ತರ ಹುಡುಕುವಂಥ ಕೆಲಸ ಆಗಬೇಕು ಮತ್ತು ಸಂಬಂಂಧ ತಾವು ಮುಕ್ತ ಮನಸಿನಿಂದ ಸಲಹೆ ಸ್ವೀಕರಿಸಲು ಸಿದ್ಧ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವಿಸ್ತೃತ ವರದಿ ನೀಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ನಾವು ಬಿಡಲ್ಲ ಎಂದು ಪ್ರಧಾನಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜನಾಥ್ ಸಿಂಗ್, ರಾಜಸ್ಥಾನ ಮೂಲದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿರುವುದಾಗಿ ತಿಳಿಸಿದರು.
ಇದಕ್ಕೆ ಒಪ್ಪದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಏಕೆಂದರೆ ಇದರಲ್ಲಿ ಅವರ ಪಾತ್ರವೂ ಇದೆ. ಹೀಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.