ದೇಶ

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ: 10 ಸಾವು

ನವೆದಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತ ಹಾಗೂ ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪನದಿಂದಾಗಿ ಭಾರತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಪಾಟ್ನಾ, ಅಸ್ಸಾಂ, ಜಾರ್ಖಾಂಡ್, ಕೋಲ್ಕತಾ, ಲಖನೌ ಸೇರಿದಂತೆ ಉತ್ತರ ಹಾಗೂ ಪೂರ್ವ ಭಾರತದ ಹಲವೆಡೆ  ಭೂಮಿ ಕಂಪಿಸಿದೆ. ಭೂ ಕಂಪನದಿಂದಾಗಿ ಅಲ್ಲಿನ ಜನತೆ ಆತಂಕಗೊಂಡು ಮನೆ ಹಾಗೂ ಕಚೇರಿಗಳಿಂದ ಹೊರ ಬಂದಿದ್ದಾರೆ.

ನೇಪಾಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದ್ದು, ಸುಮಾರು 10 ರಿಂದ 20 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ.

ನೇಪಾಳದಲ್ಲೂ ಪ್ರಬಲ ಭೂಕಂಪನ
ಭೂಕಂಪನದ ಕೇಂದ್ರ ಬಿಂದು ಇದೀಗ ನೇಪಾಳದ ಕಠ್ಮಂಡುವಿನಲ್ಲಿ ಕಂಡು ಬಂದಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.5 ರಷ್ಟು ದಾಖಲಾಗಿದೆ. ಭೂಕಂಪನದಿಂದಾಗಿ ಕಠ್ಮಂಡುವಿನ ಸುತ್ತಮುತ್ತಲಿನ ಪ್ರದೇಶವೆಲ್ಲ ಧೂಳುಮಯವಾಗಿದ್ದು, ಅಲ್ಲಿನ ಕಟ್ಟಡಗಳು ಉರುಳಿವೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ಪ್ರಾಣಾಪಾಯವಾಗಿರುವ ಕುರಿತಂತೆ ವರದಿಯಾಗಿಲ್ಲ.

ದೆಹಲಿ, ಕೋಲ್ಕತಾ ಮೆಟ್ರೋ ಸಂಚಾರ ಸ್ಥಗಿತ
ಉತ್ತರ ಹಾಗೂ ಪೂರ್ವ ಭಾರತದ ಹಲವೆಡೆ  ಭೂಮಿ ಕಂಪಿಸಿರುವ ಹಿನ್ನೆಲೆಯಲ್ಲಿ ದೆಹಲಿ, ಕೋಲ್ಕತಾ ಹಾಗೂ ಇನ್ನಿತರೆ ಪ್ರದೇಶದ ಮೆಟ್ರೋ ಸಂಚಾರ ಕಡಿತಗೊಂಡಿದ್ದು, ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ ಎಂದು ಹೇಳಲಾಗುತ್ತಿದೆ.

ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯವಾಣಿ ಆರಂಭಿಸಿದ್ದು, ಸಹಾಯಕ್ಕಾಗಿ 00977-9851135141, 00977-9851107021ಸಂಪರ್ಕಿಸಬಹುದಾಗಿದೆ.

SCROLL FOR NEXT