ಗುವಾಹಟಿ: ಅಸ್ಸಾಂ ನಲ್ಲಿ ಕಳೆದ 4 ವರ್ಷಗಳಲ್ಲಿ ನಡೆದ ಬಂಡುಕೋರ ವಿರುದ್ಧದ ಕಾರ್ಯಾಚರಣೆಯಲ್ಲಿ 319 ನಾಗರಿಕರು 336 ಉಗ್ರರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ನ ಸಚಿವ ರಾಕಿಬುಲ್ ಹುಸೇನ್ ವಿಧಾನಸಭೆಗೆ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 23 ರಂದು ನಡೆದ ಎನ್.ಡಿ.ಎಫ್.ಬಿ ದಂಗೆಯ ವೇಳೆ 15 ಬಂಡುಕೋರರನ್ನು ಪೊಲೀಸರು ಹತ್ಯೆ ಮಾಡಿ ಜುಲೈ 31 ರ ವರೆಗೆ 448 ಜನರನ್ನು ಬಂಧಿಸಿದ್ದರು ಎಂದು ಸಚಿವ ಹುಸೇನ್ ಮಾಹಿತಿ ನೀಡಿದ್ದಾರೆ. ಅಸ್ಸಾಂ ನಲ್ಲಿ ಒಟ್ಟು 8 ಉಗ್ರ ಸಂಘಟನೆಗಳಿದ್ದು 11 ಭೂಗತ ಸಂಘಟನೆಗಳು ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಸಿದ್ಧವಿದೆ.
ವಿಧಾನಸಭೆಯಲ್ಲಿ ಎಜಿಪಿ ಸದಸ್ಯ ಕೆಸಬ್ ಮಹಂತ ಕೇಳಿದ ಪ್ರಶ್ನೆಗೆ ಸಿ.ಎಂ ತರುಣ್ ಗೊಗೊಯ್ ಪರವಾಗಿ ಉತ್ತರಿಸಿದ ಸಚಿವ ಹುಸೇನ್, ಕಳೆದ ನಾಲ್ಕುವರೆ ವರ್ಷದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6 ,098 ಜನರನ್ನು ಹತ್ಯೆ ಮಾಡಲಾಗಿದ್ದು 8164 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಸಚಿವರು ನೀಡಿರುವ ಮಾಹಿತಿ ಪ್ರಕಾರ ಅಸ್ಸಾಂ ನಲ್ಲಿ ಒಟ್ಟು 346 ಪೊಲೀಸ್ ಠಾಣೆಗಳಿದ್ದು, 60,244 ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 15259 ಹುದ್ದೆಗಳು ಖಾಲಿ ಇದೆ.