ನವದೆಹಲಿ: ವಿವಾದಕ್ಕೆ ಸಿಲುಕಿರುವ ಸ್ವಯಂಘೋಷಿತ ವಿವಾದಿತ ದೇವ ಮಹಿಳೆ ರಾಧೆ ಮಾ ಅವರ ವಿರುದ್ಧ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ.
ರಾಧೆ ಮಾ ಅವರ ಮಾಜಿ ಅನುಯಾಯಿ ಹಾಗೂ ಟೆಲಿವಿಷನ್ ನಟಿ ಡಾಲಿ ಬಿಂದ್ರಾ ಅವರು ರಾಧೆ ಮಾ ಅವರ ಕಡೆಯಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನನಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿವೆ ಎಂದು ದೂರು ದಾಖಲಿಸಿರುವ ಬಿಂದ್ರಾ, ಈ ಕರೆಗಲು ರಾಧೆ ಮಾ, ಎಂಎಂ ಗುಪ್ತಾ ಮತ್ತು ಅಸರಾಂ ಅನುಯಾಯಿಗಳಿಂದ ಬರುತ್ತಿರುವ ಕರೆಗಳಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಾಧೆ ಮಾ ಅವರ ವಿರುದ್ಧ ಮಹಿಳೆಯೊಬ್ಬರು, ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ದೇವ ಮಹಿಳೆ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರಲ್ಲದೇ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ನನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನನ್ನ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಧೆ ಮಾ ಅವರ ಕೈವಾಡ ಇದೆ ಎಂದು ಬೊರಿವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ರಾಧೆ ಮಾಗೆ ನೋಟಿಸ್ ಸಹ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ರಾಧೆ ಮಾ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು. ವಕೀಲ ಅಶೋಕ್ ರಜಪುತ್ ಅವರು ರಾಧೆ ಮಾ ವಿರುದ್ಧ ಮುಂಬೈ ಬೊರಿವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಸಭ್ಯ ವರ್ತನೆ ಹಾಗೂ ಮೂಢಾಚರಣೆ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.