ಆಗ್ರಾ: ಪ್ರಪಂಚದ 7 ಅದ್ಭುತಗಳಲ್ಲಿ ಒಂದಾದ 17 ನೇ ಶತಮಾನದ ತಾಜ್ ಮಹಲಿನ ಮುಖ್ಯ ಧ್ವಾರದಲ್ಲಿದ್ದ ತಾಮ್ರದ ತೂಗು ದೀಪ ಗೊಂಚಲು ಮುರಿದು ಬಿದ್ದ ಪ್ರಕರಣದ ತನಿಖೆ ನಡೆಸುವಂತೆ ಪ್ರಾಚ್ಯ ಸಂಶೋಧನಾ ಇಲಾಖೆ ಆದೇಶಿಸಿದೆ.
ಬ್ರಿಟಿಷರ ಕಾಲದ 60 ಕೆಜಿ ತೂಕವಿದ್ದ ತೂಗುದೀಪದ ಗೊಂಚಲು ಬುಧವಾರ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು. ಆರು ಅಡಿ ಎತ್ತರ, ನಾಲ್ಕು ಅಡಿ ಅಗಲವಿದ್ದ ಈ ತೂಗು ದೀಪವನ್ನು ಲಾರ್ಡ್ ಕರ್ಜನ್ ಉಡುಗೊರೆಯಾಗಿ ನೀಡಿದ್ದರು, 1905 ರಲ್ಲಿ ಈ ತೂಗು ದೀಪವನ್ನು ತಾಜ ಮಹಲಿನ ಮುಖ್ಯ ದ್ವಾರದಲ್ಲಿ ನೇತು ಹಾಕಲಾಗಿತ್ತು. ಭಾರತೀಯ ಪ್ರಾಚ್ಯ ಸಂಶೋಧನಾ ಇಲಾಖೆ ಸೂಪರಿಂಡೆಂಟ್ ಭುವನ್ ಕುಮಾರ್ ಪ್ರಕರಣದ ತನಿಖೆ ನಡೆಸುವಂತೆ ಆದೇಶಿದ್ದಾರೆ.
ತೂಗುದೀಪ ತುಂಬಾ ಹಳೇಯದಾಗಿದ್ದರಿಂದ ಕಿತ್ತು ಬಿದ್ದಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟ ವಶಾತ್ ತೂಗುದೀಪ ಗೊಂಚಲು ಕಿತ್ತು ಬೀಳುವ ಸಂದರ್ಭದಲ್ಲಿ ಕೆಳಗೆ ಯಾರೂ ಇರಲಿಲ್ಲ. ಹೀಗಾಗಿ ಭಾರಿ ಪ್ರಮಾಣದ ದುರಂತ ತಪ್ಪಿದೆ ಎಂದು ಹೇಳಲಾಗಿದೆ.