ನವದೆಹಲಿ: ಬಿಹಾರ ಪ್ರಚಾರ ಕಾರ್ಯವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರಕ್ಕೆ 1.25ಲಕ್ಷ ಕೋಟಿ ಪ್ಯಾಕೇಜ್ ನೀಡುವುದಾಗಿ ಹೇಳಿದ್ದು ಕೇವಲ ಪ್ರಚಾರ ತಂತ್ರವಷ್ಟೇ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಬಿಹಾರಕ್ಕೆ ಘೋಷಣೆಯಾಗಿರುವ ನೆರವು ಪ್ಯಾಕೇಜ್ ಕುರಿತಂತೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಿತೀಶ್ ಕುಮಾರ್ ಅವರು, ಇದೀಗ ಘೋಷಣೆ ಮಾಡಿರುವ ಯೋಜನೆಗಳು ಹಳೆ ಯೋಜನೆಗಳಾಗಿದ್ದು, ಚಾಲ್ತಿಯಲ್ಲಿರುವ ಯೋಜನೆಗಳನ್ನೇ ಮತ್ತೊಮ್ಮೆ ಘೋಷಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 6000 ಕೋಟಿ ಹಣವನ್ನು ವಿಚಿತ್ರ ಯೋಜನೆಗಳಿಗೆ ಬಳಸಲಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಕುರಿತಂತೆ ಮಾತನಾಡಿರುವ ಅವರು, ಕೇಂದ್ರ ಬಜೆಟ್ ನಿಂದ ಇಷ್ಟು ಹಣ ಅವ್ಯವಸ್ಥೆಗಳಿಗೆ ಬಳಕೆ ಮಾಡಲು ಯೋಜನೆ ರೂಪಿಸುತ್ತಿದ್ದರೂ ಅರುಣ್ ಜೇಟ್ಲಿ ಆಗಲಿ ಅಥವಾ ಅವರ ಸಚಿವಾಲಯ ಈ ಬಗ್ಗೆ ಆಲೋಚನೆ ನಡೆಸದೆ ಇರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಎಂದು ಹೇಳಿದ್ದಾರೆ.
ಆ.19 ರಂದು ವಿಧಾನಸಭಾ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯಕ್ಕಾಗಿ ಬಿಹಾರಕ್ಕೆ ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು. ಬಿಹಾರಕ್ಕೆ ಕೊಡುಗೆಯಾಗಿ ಅಲ್ಲಿನ ಜನತೆಗೆ 1.25 ಕೋಟಿ ವಿಶೇಷ ಅನುದಾನ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದರು. ಅಲ್ಲದೆ, ಇದರ ಜೊತೆಗೆ ಪ್ರಸ್ತುತ ಜಾರಿಯಲ್ಲಿರುವ ಕಾಮಗಾರಿಗಳಿಗಾಗಿ ಕೇಂದ್ರದಿಂದ 40 ಸಾವಿರ ಕೋಟಿ ರುಪಾಯಿ ನೆರವು ನೀಡುವುದಾಗಿ ಹೇಳಿದ್ದರು.