ದೇಶ

ದೆಹಲಿ: ಅಕ್ರಮ ಗುಡಿಸಲು ತೆರವು ಕಾರ್ಯಾಚರಣೆ ವೇಳೆ ದುರಂತ, ಮಗುವಿನ ಸಾವು

Manjula VN

ನವದೆಹಲಿ: ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಭಾನುವಾರ ದೆಹಲಿ ರೈಲ್ವೇ ಇಲಾಖೆ ನಡೆಸಿದ ಗುಡಿಸಲು ತೆರವು  ಕಾರ್ಯಾಚರಣೆಯ ವೇಳೆ ಒಂದು ಮಗು ಸಾವನ್ನಪ್ಪಿದೆ.

ಪಶ್ಚಿಮ ದೆಹಲಿಯ ಶಾಕುರ್ ಬಸ್ತಿಯಲ್ಲಿರುವ ಸುಮಾರು 500 ಗುಡಿಸಲುಗಳನ್ನು ರೈಲ್ವೇ ಇಲಾಖೆಯ ಅಧಿಕಾರಿಗಳು ಇಂದು ನೆಲಸಮಗೊಳಿಸಿದ್ದಾರೆ. ಈ ವೇಳೆ ಗುಡಿಸಲಿನ ಅವಶೇಷಗಳಡಿಯಲ್ಲಿ  ಸಿಲುಕಿದ ಪುಟ್ಟ ಮಗುವೊಂದು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಇನ್ನು ಇಂದು ರೈಲ್ವೇ ಇಲಾಖೆಯ ಅಧಿಕಾರಿಗಳು ನೆಸಿದ ತೆರವು ಕಾರ್ಯಾಚರಣೆ ತೀವ್ರ ಟೀಕೆಗೆ ಗುರಿಯಾಗಿದ್ದು, ತೆರವು  ಮಾಡುವ ಮುನ್ನ ಗುಡಿಸಲು ನಿವಾಸಿಗಳಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ನೋಟಿಸ್ ಅಥವಾ ಮುನ್ಸೂಚನೆ ನೀಡಿರಲಿಲ್ಲ. ಏಕಾ ಏಕಿ ಅಧಿಕಾರಿಗಳು ಗುಡಿಸಲು ತೆರವು  ಮಾಡಿದ್ದರಿಂದಾಗಿ ಅಲ್ಲಿನ ನಿವಾಸಿಗಳು ಇದೀಗ ಅಕ್ಷರಶಃ ನಿರಾಶ್ರಿತರಾಗಿದ್ದಾರೆ.

ಪ್ರಸ್ತುತ ದೆಹಲಿಯಲ್ಲಿ ವಿಪರೀತ ಚಳಿ ಇದ್ದು, ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಗಳ ತೆರವು ಕಾರ್ಯ ಕೈಗೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ದೆಹಲಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆಗೆ ಸಂಬಂಧಿಸಿದಂತೆ ಮೂವರು ರೈಲ್ವೇ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು,  ಇಷ್ಟೊಂದು ಚಳಿಯ ನಡುವೆಯೂ ರೈಲ್ವೇ ಇಲಾಖೆಯ ಅಧಿಕಾರಿಗಳು 500 ಗುಡಿಸಲುಗಳನ್ನು ನೆಲಸಮ ಮಾಡಿ, ಅವರನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ. ಒಂದು ಮಗುವಿನ ಪ್ರಾಣ ಕೂಡ  ಹೋಗಿದೆ. ಭಗವಂತ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

SCROLL FOR NEXT