ನವದೆಹಲಿ: ಪಾಕಿಸ್ತಾನದೊಂದಿಗೆ ಯುದ್ಧ ಆಯ್ಕೆಯಲ್ಲ, ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ. ಏಕೆಂದರೆ ಭಯೋತ್ಪಾದನೆಯ ಕರಿ ನೆರಳಿನ್ನು ಹೋಗಲಾಡಿಸಲು ಮಾತುಕತೆಯೊಂದೇ ಪರಿಹಾರ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಕಳೆದ ಜುಲೈ ಮತ್ತು ಕಳೆದ ತಿಂಗಳು ಪ್ಯಾರಿಸ್ ನಲ್ಲಿ ನಡೆದ ಹವಾಮಾನ ಕುರಿತ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.
ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮಾತುಕತೆಯೊಂದೇ ಪರಿಹಾರ. ಅದರಂತೆ ಬ್ಯಾಂಕಾಕ್ ನಲ್ಲಿ ಮಾತುಕತೆ ನಡೆದಿತ್ತು, ಆದರೆ ಭಾರತ ಮತ್ತು ಪಾಕಿಸ್ತಾನ ನಡುವಣ ಎಲ್ಲ ಸಮಸ್ಯೆಗಳಿಗೂ ಒಂದು ಸುತ್ತಿನ ಮಾತುಕತೆಯಿಂದ ಪರಿಹಾರ ಸಾಧ್ಯವಿಲ್ಲ.ಆದುದರಿಂದ ನಮ್ಮ ಮಾತುಕತೆಯನ್ನು ಮುಂದುವರಿಸುತ್ತೇವೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.
ಒಸಾಮಾ ಬಿನ್ ಲಾಡೆನ್ ನನ್ನು ಸಾಯಿಸಲು ಅಮೆರಿಕ ಉಪಾಯ ರೂಪಿಸಿದಂತೆ ಭಾರತ ಕೂಡ ಯೋಜನೆ ಮಾಡುತ್ತಿದೆಯೇ ಎಂದು ಬಿಜೆಪಿ ಸದಸ್ಯ ಗಣೇಶ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲನೆ ಮಾಡುವ ಕುರಿತು ಮಾತುಕತೆ ನಡೆಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉದ್ದೇಶವೂ ಇದೇ ಆಗಿದೆ ಎಂದರು.