ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ಅನುಚಿತ ಪದ ಬಳಸಿದ ಹಿನ್ನೆಲೆಯಲ್ಲಿ ಬಹು ಭಾಷಾ ನಟಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಶಾಸಕಿ ರೋಜಾ ಅವರನ್ನು ಆಂಧ್ರಪ್ರದೇಶ ವಿಧಾನಸಭೆಯಿಂದ ಒಂದು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ಚಂದ್ರಬಾಬು ನಾಯ್ಡು ಅವರನ್ನು 'ಕಾಮ ಚಂದ್ರಬಾಬು, ಕಾಲ್ ಚಂದ್ರಬಾಬು ಹಾಗೂ ಸ್ಕ್ಯಾಮ್ ಚಂದ್ರಬಾಬು' ಎಂದು ಕರೆದಿದ್ದ ನಾಗಿರಿ ವಿಧಾಸಭಾ ಕ್ಷೇತ್ರದ ಶಾಸಕಿ ರೋಜಾ ಅವರಿಗೆ ಸ್ಪೀಕರ್ ಕೊಡಲ ಶಿವಪ್ರಾಸದ್ ಅವರು ಅಮಾನತು ಶಿಕ್ಷೆ ವಿಧಿಸಿದ್ದಾರೆ.
ರೋಜಾ ಅವರನ್ನು ವಿಧಾಸಭೆಯಿಂದ ಒಂದು ವರ್ಷಗಳ ಕಾಲ ಅಮಾನತು ಮಾಡಬೇಕು ಎಂದು ಹಣಕಾಸು ಸಚಿವ ಯೆನಮಲ ರಾಮಕೃಷ್ಣ ನಾಯ್ಡು ಅವರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆ ನಿಯಮಗಳ ಪ್ರಕಾರ ಸ್ಪೀಕರ್ ರೋಜಾ ಅವರನ್ನು ಅಮಾನತು ಮಾಡಿದ್ದಾರೆ.
ಸ್ಪೀಕರ್ ಅವರ ಈ ನಿರ್ಧಾರವನ್ನು ವಿರೋಧಿಸಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೊಹನ್ ರೆಡ್ಡಿ ಸೇರಿದಂತೆ ಹಲವು ವೈಎಸ್‌ಆರ್ ನಾಯಕರು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.