ನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾದ ಆಪಾದನೆಗಳ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ಇತರ ನಾಯಕರ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಾಗರಿಕ ಮಾನಹಾನಿ ಖಟ್ಲೆ ದಾಖಲಿಸಿ 10 ಕೋಟಿ ರುಪಾಯಿಗಳ ಪರಿಹಾರ ಕೇಳಿದ್ದಾರೆ.
ತಮ್ಮ ವಿರುದ್ಧ ಮಾಡಲಾಗುತ್ತಿರುವ ‘ತಪ್ಪು ಮತ್ತು ಮಾನಹಾನಿಕರ‘ ಆಪಾದನೆಗಳಿಗಾಗಿ ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರ ವಿರುದ್ಧ ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಜೇಟ್ಲಿ ಭಾನುವಾರ ಹೇಳಿದ್ದರು. ತಮ್ಮ ಕಾನೂನು ತಂಡವು ಕೇಜ್ರಿವಾಲ್ ಮತ್ತು ಇತರರ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ನಾಗರಿಕ ಮಾನಹಾನಿ ಖಟ್ಲೆಗಳನ್ನೂ, ಪಟಿಯಾಲ ಹೌಸ್ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಹಣಕಾಸು ಸಚಿವ ಅರುಣ್ ಜೈಟ್ಲಿಗೆ ಸಚಿವರುಗಳಾದ ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಪಿಯೂಶ್ ಗೋಯೆಲ್ ಮುಂತಾದವರು ಸಾಥ್ ನೀಡಿದ್ದಾರೆ.
ಆಪ್ ಕೂಡಾ ಜೇಟ್ಲಿ ವಿರುದ್ಧ ಡಿಡಿಸಿಎಯಲ್ಲಿ ಫೋರ್ಜರಿ, ಭ್ರಷ್ಟಾಚಾರ, ಸಾರ್ವಜನಿಕ ಹಣದ ಲೂಟಿ ಆರೋಪಗಳಿಗೆ ಸಂಬಂಧಿಸಿದಂತೆ ಜೇಟ್ಲಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಿದೆ. ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ ಸುಬ್ರಮಣಿಯಂ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ,