ನವದೆಹಲಿ: ಡಿಡಿಸಿಎ ಹಗರಣ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೆ ಆಮ್ ಆದ್ಮಿ ಪಕ್ಷ ಹೆದರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.
ತಮ್ಮ ಜೇಟ್ಲಿ ಕೇಸ್ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಸಿಎಂ, ಕೇಂದ್ರ ಸಚಿವರು ಕೇಸ್ ದಾಖಲಿಸುವ ಮೂಲಕ ನನ್ನನ್ನು ಮತ್ತು ನಮ್ಮ ಪಕ್ಷವನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಮತ್ತು ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
'ಜೇಟ್ಲಿ ಅವರು ಕೋರ್ಟ್ ಕೇಸ್ ಮೂಲಕ ನಮ್ಮ ಹೆದರಿಸಲು ಸಾಧ್ಯವಿಲ್ಲ. ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್‌ನಲ್ಲಿ ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ಜೇಟ್ಲಿ ಅವರು ದೆಹಲಿ ಸರ್ಕಾರದ ತನಿಖಾ ಆಯೋಗಕ್ಕೆ ಸಹಕರಿಸಬೇಕು ಮತ್ತು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಬೇಕು ಎಂದಿದ್ದಾರೆ.
ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ನಾಯಕರ ವಿರುದ್ಧ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ ಹಾಗೂ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಪಟಿಯಾಲ ಹೌಸ್ ಕೋರ್ಟ್ ಜನವರಿ 5, 2016ಕ್ಕೆ ನಿಗದಿಪಡಿಸಿದೆ.
ಜೇಟ್ಲಿ ಅವರು ದೆಹಲಿ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯಲ್ಲಿ ಭಾರೀ ಹಗರಣ ನಡೆಸಿದ್ದಾರೆ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.