ವಡೋದರಾ: ಸಂಚಾರ ನಿಯಮ ಉಲ್ಲಂಘಿಸಿ ನಂತರ ಪೊಲೀಸ್ ಮೇಲೆಯೇ ಹಲ್ಲೆ ಮಾಡಿ, ಬೈಕ್ ಬೆಂಕಿ ಹಚ್ಚಿರುವ ಘಟನೆಯೊಂದು ವಡೋದರಾದಲ್ಲಿ ಮಂಗಳವಾರ ನಡೆದಿದೆ.
ಶಾಂತಿಲಾಲ್ ಪರ್ಮಾರ್ ಹಲ್ಲೆಗೊಳಗಾದ ಸಂಚಾರಿ ಪೇದೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಂಚಾರ ನಿಯಮ ಉಲ್ಲಂಘಿಸಿ ಒಂದೇ ಬೈಕ್ ನಲ್ಲಿ ಮೂವರು ಯುವಕರನ್ನು ಚಲಿಸುತ್ತಿದ್ದನ್ನು ಪೇದೆ ನೋಡಿದ್ದಾರೆ. ಈ ವೇಳೆ ಯುವಕರು ಹೋಗುತ್ತಿದ್ದ ಬೈಕ್ ನ್ನು ಪೇದೆ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದಾರೆ. ಈ ವೇಳೆ ಯುವಕರು ಹಾಗೂ ಪೇದೆ ಮಧ್ಯೆ ಸಾಕಷ್ಟು ಮಾತಿನ ಚಕಮಕಿ ನಡೆದಿದೆ. ನಂತರ ಯುವಕರು ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪೇದೆಯ ಬೈಕ್ ಗೆ ಬೆಂಕಿ ಹಚ್ಚಿದ್ದಾರೆಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವಕರು, ಬೈಕ್ ನ್ನು ತಡೆದ ಪೇದೆ ನಮ್ಮ ಗೆಳೆಯನೊಬ್ಬನ ಮೇಲೆ ಲಾಠಿಯಿಂದ ಹೊಡೆದರು. ಇದರಿಂದಾಗಿ ಸ್ಥಳದಲ್ಲಿ ಜನರು ಸೇರುವಂತಾಯಿತು ಎಂದು ಹೇಳಿದ್ದಾರೆ.
ಯುವಕರ ಆರೋಪವನ್ನು ತಳ್ಳಿಹಾಕಿರುವ ಪೇದೆ, ಮೂರು ಜನ ಯುವಕರು ಬೈಕ್ ಮೂಲಕ ಓಟದ ಸ್ಪರ್ಧೆ ನಡೆಸುತ್ತಿದ್ದರು. ಈ ವೇಳೆ ಅವರನ್ನು ತಡೆದಾಗ ಅವರಿದ್ದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ಅಧಿಕಾರಿಗಳಿಗೆ ವಿಡಿಯೋ ದೊರಕಿದ್ದು, ವಿಡಿಯೋವನ್ನು ಸ್ಥಳೀಯ ಮಾಧ್ಯಮದ ವರದಿಗಾರರೊಬ್ಬರು ಮಾಡಿದ್ದಾರೆಂದು ತಿಳಿದುಬಂದಿದೆ. ಇದೀಗ ವಿಡಿಯೋವನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.