ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆ ಮಾಡಿರುವ ಮತ್ತೊಂದು ಪೋಸ್ಟರ್ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ವಿರುದ್ಧ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಬಿಜೆಪಿ ತನ್ನ ಪೋಸ್ಟರ್‌ನಲ್ಲಿ ತಮ್ಮ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ರ ಚಿತ್ರವನ್ನು ಬಳಸಿಕೊಂಡಿದ್ದಷ್ಟೇ ಅಲ್ಲದೇ ಅವರ ಜಾತಿ ಅಥವಾ ಗೋತ್ರದ ಕುರಿತು ವ್ಯಂಗ್ಯವಾಡಿದೆ. ಗಣರಾಜ್ಯೋತ್ಸವ ದಿನಾಚರಣೆಗೆ ಕೇಂದ್ರ ಸರ್ಕಾರ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ ನಿರಾಕರಿಸಿದ್ದ ಕುರಿತು ಕೇಜ್ರಿ ನೀಡಿದ್ದ ಹೇಳಿಕೆ ಕುರಿತಂತೆ ಪೋಸ್ಟರ್‌ನಲ್ಲಿ ವ್ಯಂಗ್ಯಮಾಡಲಾಗಿದೆ. ಅಷ್ಟೇ ಅಲ್ಲದೇ ಕೇಜ್ರಿವಾಲ್ ಅವರ ಜಾತಿ ಕುರಿತು ವ್ಯಂಗ್ಯ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪಕ್ಷ ವೈಯುಕ್ತಿಕ ನಿಂಧನೆಗೆ ಇಳಿದಿದ್ದು, ಈ ಹಿಂದೆಯೂ ಕೂಡ ಬಿಜೆಪಿ ತನ್ನ ಮಕ್ಕಳನ್ನು ಪೋಸ್ಟರ್‌ನಲ್ಲಿ ಬಳಸಿಕೊಂಡಿತ್ತು. ಆಗ ನಾನು ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಇಡೀ ಅಗರ್ವಾಲ್ ಸಮಾಜವನ್ನು ಬಿಜೆಪಿ ಟೀಕಿಸಿದ್ದು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಕೂಡಲೇ ಬಿಜೆಪಿ ಪಕ್ಷ ತನ್ನ ಪೋಸ್ಟರ್‌ಗಳನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಪ್ ಪಕ್ಷದ ಮತ್ತೋರ್ವ ಮುಖಂಡ ಆಶುತೋಷ್, ಇನ್ನೆರಡು ಗಂಟೆಗಳಲ್ಲಿ ಬಿಜೆಪಿ ತನ್ನ ವಿವಾದಾತ್ಮಕ ಪೋಸ್ಟರ್‌ಗಳನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಒಟ್ಟಾರೆ ದಿನಕಳೆದಂತೆ ದೆಹಲಿ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ನಡುವೆಯೇ ಹಲವು ವಿವಾದಗಳು ಹುಟ್ಟಿಕೊಳ್ಳುತ್ತಿದ್ದು, ಎಎಪಿ ತನ್ನ ಪೋಸ್ಟರ್‌ನಲ್ಲಿ ಕಿರಣ್ ಬೇಡಿ ಅವರ ಭಾವಚಿತ್ರವನ್ನು ಬಳಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದರೆ, ಇತ್ತ ಬಿಜೆಪಿ ತನ್ನ ಪೋಸ್ಟರ್‌ವೊಂದರಲ್ಲಿ ಹಿರಿಯ ಗಾಂಧಿವಾದಿ ಅಣ್ಣಾಹಜಾರೆ ಅವರನ್ನು ಫೋಟೋ ಫ್ರೇಮ್‌ನಲ್ಲಿ ಹಾಕಿ ಹೊಸವಿವಾದವನ್ನು ಹುಟ್ಟುಹಾಕಿತ್ತು. ಇದೀಗ ಬಿಜೆಪಿ ಪಕ್ಷದ ಮತ್ತೊಂದು ಪೋಸ್ಟರ್ ವಿವಾದಕ್ಕೀಡಾಗಿದೆ.