ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೆದ್ದಾರಿ ಸುಂಕ ವಸೂಲಿ ವಿರೋಧಿ ಆಂದೋಲನದ ನೇತೃತ್ವ ವಹಿಸಿದ್ದ ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರ್ ಅವರನ್ನು ಹಾಡಹಗಲೇ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು, ಇಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಾಗಿದೆ.
ಗೋವಿಂದ್ ಪನ್ಸಾರೆ ಅವರಿಗೆ ಸಾಕಷ್ಟು ಬೆಂಬಲಿಗರಿದ್ದು, ಅಪಾರ ಪ್ರಮಾಣದ ಸ್ನೇಹ ಬಳಗವನ್ನು ಹೊಂದಿದ್ದರು. ಪನ್ಸಾರೆ ಅವರ ಅಕಾಲಿಕ ಸಾವಿಗೆ ಅವರ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಿಮಗೆ ಆದರೆ ನಮ್ಮನ್ನು ಕೊಲ್ಲಿ (ಕಿಲ್ ಮಿ ಇಫ್ ಯು ಕ್ಯಾನ್) ಎಂಬ ಘೋಷಣಾ ವಾಕ್ಯಗಳುಳ್ಳ ಕೆಂಪು ಟಿ ಶರ್ಟ್‌ಗಳನ್ನು ತೊಟ್ಟು ಮಹಾರಾಷ್ಟ್ರದಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಾದ್ಯಂತ 24 ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿದ್ದಾರೆ.
82 ವರ್ಷದ ಗೋವಿಂದ್ ಪನ್ಸಾರೆ ಅವರು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೆದ್ದಾರಿ ಸುಂಕ ವಸೂಲಿ ವಿರೋಧಿ ಆಂದೋಲನದ ನೇತೃತ್ವ ವಹಿಸಿಕೊಂಡಿದ್ದರು. ಫೆ.17 ರಂದು ಬೆಳಗಿನ ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ಪನ್ಸಾರೆ ಹಾಗೂ ಅವರ ಪತ್ನಿ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪನ್ಸಾರೆ ಹಾಗೂ ಅವರ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪನ್ಸಾರೆ ಅವರ ಪತ್ನಿ ಅಪಾಯದಿಂದ ಪಾರಾಗಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಪನ್ಸಾರೆ ಅವರು ಫೆ.20ರಂದು ಸಾವನ್ನಪ್ಪಿದ್ದರು.