ಬೆಂಗಳೂರು: ಕ್ರಿಕೆಟ್ ಆಡುವ ವಿಚಾರವಾಗಿ ಎರಡು ಯುವಕರ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬನ್ನೇರುಘಟ್ಟ ರಸ್ತೆ ವೇವರ್ಸ್ ಕಾಲೋನಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಮತ್ತಿಬ್ಬರು ಯುವಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಕೆರೆ ನಿವಾಸಿ ರಾಜೇಶ್ ಅಲಿಯಾಸ್ ಗುಂಡ (24) ಕೊಲೆಯಾದವ. ಶಿವು ಹಾಗೂ ಬಾಲಾಜಿ ಎಂಬರಿಗೆ ಇರಿತದಿಂದ ಗಾಯಗಳಾಗಿವೆ. ಈ ಪೈಕಿ ಬಾಲಾಜಿ ಸ್ಥಿತಿ ಚಿಂತಾಜನಕವಾಗಿದೆ. ಭಾನುವಾರ ರಜೆ ಇದ್ದ ಕಾರಣ ನಗರದ ವಿವಿಧೆಡೆ ಕೆಲಸ ಮಾಡುತ್ತಿದ್ದ ಯುವಕರು ಕ್ರಿಕೆಟ್ ಆಡಲೆಂದು ಬಸವನಪುರದ ವೇವರ್ಸ್ ಕಾಲೋನಿ ಆಟದ ಮೈದಾನದಲ್ಲಿ ಸೇರಿದ್ದಾರೆ, ಬನ್ನೇರುಘಟ್ಟ ಸಮೀಪದ ಕಲ್ಕೆರೆ ಗ್ರಾಮ ಹಾಗೂ ಬಿಲ್ಲವದರನಹಳ್ಳಿ ಗ್ರಾಮಗಳ ಯುವಕರ ನಡುವೆ ಪಂದ್ಯ ಆರಂಭವಾಗಿತ್ತು.
ಸಂಜೆವರೆಗೂ ಎಲ್ಲವೂ ಚೆನ್ನಾಗಿತ್ತು. ಆದರೆ, ಪಂದ್ಯದ ಕೊನೆಯಲ್ಲಿ ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಆರಂಭವಾಗಿದೆ. ಬಳಿಕ ಪರಸ್ಪರ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಬಡಿದಾಡಲು ಆರಂಭಿಸಿದರು. ಜಗಳ ವಿಕೋಪಕ್ಕೆ ತಿರುಗಿ ಎದುರಾಳಿ ಗುಂಪಿನ ಕೆಲವರು ಚಾಕು ತೆಗೆದು ರಾಜೇಶನಿಗ ಹಲವು ಬಾರಿ ತಿವಿದಿದ್ದಾರೆ.
ತೀವ್ರ ರಕ್ತ ಸ್ರಾವವಾಗಿ ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಿರೀಶನ ರಕ್ಷಣೆಗೆ ಮುಂದಾದ ಶಿವು, ಬಾಲಾಜಿಗೂ ಇರಿದ ಪರಿಣಾಮ ಗಾಯಗಳಾಗಿವೆ. ಇಬ್ಬರನ್ನು ಸ್ನೇಹಿತರೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಆಗ್ನೇಯ ಡಿಸಿಪಿ ರೋಹಿಣಿ ಸೆಪಟ್, ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಮುಖ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದರು. ಹುಳಿಮಾವು ಠಾಣೆಯಲ್ಲಿ ಕೊಲೆ, ಕೊಲೆಯತ್ನ ದೊಂಬಿ ಪ್ರಕರಣ ದಾಖಲಾಗಿದೆ.