ನವದೆಹಲಿ: ಲಂಡನ್ ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭೇಟಿ ಮಾಡಿದ್ದ ವೇಳೆ ಆತ ಭಾರತಕ್ಕೆ ವಾಪಸ್ ಬರುವ ಇಚ್ಚೆ ವ್ಯಕ್ತ ಪಡಿಸಿದ್ದ ಎಂದು ಸುಪ್ರಿಂ ಕೋರ್ಟ್ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ದಾವೂದ್ ಸಹಚರ ಛೋಟಾ ಶಕೀಲ್ ನನ್ನು ಲಂಡನ್ ನಲ್ಲಿ ಭೇಟಿಯಾಗಿದ್ದೆ ಎಂಬು ಪತ್ರಿಕಾ ವರದಿಯನ್ನು ನಿರಾಕರಿಸಿರುವ ರಾಮ್ ಜೇಠ್ಮಲಾನಿ, ದಾವೂದ್ ಭಾರತಕ್ಕೆ ಬಂದು ಶರಣಾಗಲು ಬಯಸಿದ್ದ, ಆದರೆ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಬೇಡಿಕೆ ಸಂಬಂಧ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಈ ನಿರ್ಧಾರ ಕೇವಲ ಶರದ್ ಪವಾರ್ ಅವರದಲ್ಲ, ಯುಪಿಎ ಸರ್ಕಾರದ ಪಾಲು ಇತ್ತು ಎಂದು ಅವರು ಆರೋಪಿಸಿದ್ದಾರೆ.
ಇನ್ನು ಆತನ ಜೊತೆಗಿನ ಚರ್ಚೆಯನ್ನು ನೆನಪಿಸಿಕೊಂಡ ರಾಮ್ ಜೇಠ್ಮಲಾನಿ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿದ ದಾವೂದ್, ತಾನು ಶರಣಾದ ನಂತರ ಭಾರತದ ಪೊಲೀಸ್ ಅಧಿಕಾರಿಗಳು ವಿಚಾರಣೆ ವೇಳೆ ತನಗೆ ಥರ್ಡ್ ಡಿಗ್ರಿ ಟಾರ್ಚರ್ ನೀಡುವುದಿಲ್ಲ ಎಂಬ ಭರವಸೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದ ಎಂದು ಅವರು ಹೇಳಿದ್ದಾರೆ. ಆದರೆ ಭಾರತ ಸರ್ಕಾರ ಅವನ ಶರಣಾಗತಿಗೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.