ಅರ್ನಿಯಾ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಭಾಗದ ಆರ್ ಎಸ್ ಪುರ ಅರ್ನಿಯಾ ವಲಯದಲ್ಲಿ ಪಾಪಿ ಪಾಕಿಸ್ತಾನದ ಅಪ್ರಚೋದಿತ ದಾಳಿಯಿಂದ ಭಯಭೀತರಾಗಿರುವ ಜಮ್ಮು ಕಾಶ್ಮೀರ ಜನತೆ ತಮ್ಮ ಮನೆ ಮಠ ತೊರೆಯುತ್ತಿದ್ದು ಬೇರೆಡೆ ಆಶ್ರಯ ಬಯಸುತ್ತಿದ್ದಾರೆ.
ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಆರು ಗಡಿ ಭಾಗದ ಔಟ್ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ರಾತ್ರಿ ಇಡೀ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಬಿಎಸ್ಎಫಿ ಯೋಧರು ಪ್ರತಿದಾಳಿ ನಡೆಸಿದೆ.
ನಿನ್ನೆ ರಾತ್ರಿ 7 ಗಂಟೆಯಿಂದ ಇಂದು ಬೆಳಗ್ಗೆ 5 ಗಂಟೆಯವರೆಗೂ ಸತತವಾಗಿ ನಡೆಯುತ್ತಿರುವ ಪಾಕ್ ನ ಗುಂಡಿನ ದಾಳಿಯಿಂದಾಗಿ ಭಯಗೊಂಡಿರುವ ಗಡಿ ಭಾಗದ ಹಳ್ಳಿಯ ಜನತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ ನಡೆದ ಗುಂಡಿನ ದಾಳಿಯಲ್ಲಿ ಸ್ಥಳೀಯ ನಾಗರಿಕರು ಗಾಯಗೊಂಡಿದ್ದರು. ಹೀಗಾಗಿ ಅದೇ ಭೀತಿಯಿಂದ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಬೆಳಗ್ಗೆ 5 ಗಂಟೆಯ ನಂತರ ಮತ್ತೆ ಗುಂಡಿನ ದಾಳಿ ನಡೆದಿಲ್ಲ. ಎಂದು ಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.