ನವದೆಹಲಿ: ಭಾರತೀಯ ದಂಡಸಂಹಿತೆಯಲ್ಲಿ ಮಾನಹಾನಿಯನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸುವ ಕಲಂ ಅನ್ನು ಉಳಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಮೇಲೆ ಮಾನಹಾನಿ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಪಿಸಿಯ ಕಲಂ 499 ಮತ್ತು 500 ಅನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಕೋರ್ಟ್‍ಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಮಾನಹಾನಿಗೆ ಸಂಬಂಧಿಸಿದ ಅಪರಾಧ ದಂಡ ಸಂಹಿತೆಯ ಕಲಂ 499 ಮತ್ತು 500ರ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಸಲ್ಲಿಸಿತ್ತು. ಈ ನೋಟಿಸ್ ಆಧಾರದ ಮೇಲೆ ಸರ್ಕಾರ ಈ ಅಪಿಢವಿಟ್ ಸಲ್ಲಿಸಿದೆ. ಈ ಮೂವರು ನಾಯಕರು ಐಪಿಸಿಯ 499 ಮತ್ತು 500ನೇ ಕಲಂ ಸಂವಿಧಾನವು ನಾಗರಿಕರಿಗೆ ನೀಡಿದ ಮುಕ್ತ ಸ್ವಾತಂತ್ರ್ಯದ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದರು.