ನವದೆಹಲಿ: ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೇಂದ್ರ ಸರ್ಕಾರದ ಉನ್ನತ ಸಚಿವರ ಸಭೆ ಕರೆದಿದ್ದಾರೆ.
ನಾರ್ತ್ ಬ್ಲಾಕ್ ನಲ್ಲಿ ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಲಿದ್ದು ಪಾಕಿಸ್ತಾನದ ಕೃತ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ಗಡಿ ಭದ್ರತಾ ಪಡೆ ಮಹಾನಿರ್ದೇಶಕ ದೇವೇಂದ್ರ ಕುಮಾರ್ ಪಾಠಕ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕದನ ವಿರಾಮ ಉಲ್ಲಂಘಿಸಿರುವುದಕ್ಕೆ ಭಾರತ ಸರ್ಕಾರ ಈಗಾಗಲೇ ಇಸ್ಲಾಮಾಬಾದ್ ಹಾಗೂ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯಲ್ಲಿ ವಿರೋಧ ವ್ಯಕ್ತಪಡಿಸಿದೆ. ಆದರೂ ಗಡಿ ಭಾಗದಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ದಾಳಿಯನ್ನು ತಡೆಗಟ್ಟಲು ಸರ್ಕಾರದ ಮುಂದಿರುವ ಬೇರೆ ಆಯ್ಕೆಗಳ ಬಗ್ಗೆ ಕೇಂದ್ರ ಗೃಹ ಸಚಿವರು, ರಕ್ಷಣಾ ಸಚಿವರು ಚರ್ಚಿಸಲಿದ್ದಾರೆ.
ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಇದಕ್ಕೂ ಒಂದು ದಿನ ಮುಂಚಿತವಾಗಿ ಪಾಕ್ ಸೈನಿಕರು ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.