ನವದೆಹಲಿ:ದೇಶಾದ್ಯಂತ ಭಾರೀ ಸುದ್ದಿ ಮಾಡಿರುವ ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟಂತೆ ಆರೋಪಪಟ್ಟಿ ಸಲ್ಲಿಸಲು ರಾಜ್ಯ ತನಿಖಾ ತಂಡಕ್ಕೆ ಅವಕಾಶ ನೀಡಬೇಕೆಂಬ ಸಿಬಿಐ ಮಾಡಿರುವ ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬರುವ ಸೋಮವಾರ ಕೈಗೆತ್ತಿಕೊಳ್ಳಲಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ವಿಭಾಗೀಯ ಪೀಠ, ಜುಲೈ 20ರಂದು ವಿಚಾರಣೆ ನಡೆಸಲಿದೆ. ಇದೇ ಸಂದರ್ಭದಲ್ಲಿ ಅರ್ಜಿಯ ಪ್ರತಿಯನ್ನು ಸಬಂಧಪಟ್ಟವರಿಗೆ ಕಳುಹಿಸುವಂತೆಯೂ ಸುಪ್ರೀಂಕೋರ್ಟ್ ಹೇಳಿದೆ.
ಸಿಬಿಐ ಪರ ವಕೀಲ ಮಹೀಂದರ್ ಸಿಂಗ್ ತಮ್ಮ ಅರ್ಜಿಯಲ್ಲಿ, ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಎಲ್ಲಾ 185 ಕೇಸುಗಳನ್ನು ವಿಚಾರಣೆ ನಡೆಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ರಾಜ್ಯ ತನಿಖಾ ಸಂಸ್ಥೆ ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ಅಪರಾಧಿಗಳ ವಿರುದ್ಧ ನಿಗದಿತ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸದಿದ್ದರೆ ಶಾಸನಬದ್ಧ ಜಾಮೀನು ಸಿಗುವ ಸಾಧ್ಯತೆಯಿರುವುದರಿಂದ ಸಂಸ್ಥೆಗೆ ಆರೋಪಪಟ್ಟಿ ಸಲ್ಲಿಸಲು ತಕ್ಷಣವೇ ಅವಕಾಶ ನೀಡಬೇಕೆಂದು ಕೋರಿದ್ದರು.
ಸುಪ್ರೀಂಕೋರ್ಟ್ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಜುಲೈ 9ರಂದು ಸಿಬಿಐಗೆ ವರ್ಗಾಯಿಸಿತ್ತು.
ಈ ಮಧ್ಯೆ ಇಂದು ಕಾಂಗ್ರೆಸ್ ಮಧ್ಯಪ್ರದೇಶ ಬಂದ್ ಗೆ ಕರೆ ನೀಡಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಯಾದವ್ ನೇತೃತ್ವದಲ್ಲಿ ನಡೆದ ಬಂದ್ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಬಂದ್ ಬಹುತೇಕ ಯಶಸ್ವಿಯಾಗಿದ್ದು, ಜನರು ನಮಗೆ ಬೆಂಬಲ ನೀಡಿದ್ದಾರ ಎಂದು ರಾಜ್ಯ ಕಾಂಗ್ರೆಸ್ ನ ವಕ್ತಾರ ಕೆ.ಕೆ.ಮಿಶ್ರಾ ಹೇಳಿದರು.