ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪಾಕಿಸ್ತಾನದ ನೀತಿ ಒಂದು 'ಅಂತರಾಷ್ಟ್ರೀಯ ಜೋಕ್' ಆಗುತ್ತಿದೆ ಎಂದು ಶನಿವಾರ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಳೆದ 15 ತಿಂಗಳಿಂದ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ. ಆದರೆ ಉಫಾದಲ್ಲಿ ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆ ನೀಡುವ ಮೂಲಕ ಸಾಧಿಸಿದ್ದೇನು ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್.ಸಿಂಗ್ ಅವರು ಹೇಳಿದ್ದಾರೆ.
ತಮ್ಮ ದೇಶಕ್ಕೆ ಭೇಟಿ ನೀಡುಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ನೀಡಿದ ಆಹ್ವಾನವನ್ನು ಒಪ್ಪಿಕೊಂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ಮುಂಬೈ ದಾಳಿಕೋರರ ವಿರುದ್ಧ ಯಾವುದೇ ಕ್ರಮ ತೆಗೆಕೊಳ್ಳದ ಪಾಕ್ ಭೇಟಿಗೆ ಒಪ್ಪಿಗೆ ಸೂಚಿಸುವ ಆತುರ ಏನಿತ್ತು ಎಂದು ಪ್ರಶ್ನಿಸಿದ್ದಾರೆ.