ನವದೆಹಲಿ: ವಿದೇಶಿ ನೆರವು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದ ಮಾರ್ಚ್‍ವರೆಗೂ ಕೇಂದ್ರ ಸರ್ಕಾರ 10,117 ಸ್ವಯಂ ಸೇವಾ ಸಂಸ್ಥೆ (ಎನ್‍ಜಿಒ)ಗಳ ನೋಂದಣಿ ರದ್ದುಗೊಳಿಸಿದೆ. ಈ ಸಂಸ್ಥೆಗಳ ಆಯವ್ಯಯಗಳನ್ನು ಪರಿಶೀಲಿಸಿದ ನಂತರ 15 ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದು 10 ಪ್ರಕರಣಗಳನ್ನು ಸಂಬಂಧಪಟ್ಟ ರಾಜ್ಯಗಳಿಗೆ ತನಿಖೆ ಮಾಡಲು ಸೂಚಿಸಿದೆ.
23 ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯದ ವರದಿ ಪ್ರಕಾರ 20 ಎನ್ ಜಿಒಗಳು ವಿದೇಶಗಳಿಂದ ಹಣ ಪಡೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಕಳೆದ ವರ್ಷ 341 ಎನ್ ಜಿಒಗಳ ಮೇಲೆ ವಾರ್ಷಿಕ ವರದಿಗಳನ್ನು ನಿಧಾನವಾಗಿ ಸಲ್ಲಿಸಿದ್ದಕ್ಕೆ ರು.5,20,82,031 ದಂಡ ವಿಧಿಸಲಾಗಿದೆ.
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಫ್ ಸಿಆರ್‍ಎ)ಯಡಿ ಪೂರ್ವಾನುಮತಿ ಪಡೆದು ನೋಂದಣಿ ಮಾಡಿಸದಿರುವುದರಿಂದ 24 ಎನ್‍ಜಿಒಗಳ ಮೇಲೆ ರು.51,99,526 ದಂಡ ವಿಧಿಸಲಾಗಿದೆ. 2011ರಿಂದ ಎಫ್ ಸಿಆರ್‍ಎ ಮತ್ತು ಎಫ್ ಸಿಆರ್ ಆರ್ ಕಾಯ್ದೆಗಳು ಜಾರಿಯಲ್ಲಿವೆ. ನಿರಂತರವಾಗಿ ಮೂರು ವರ್ಷ ವಾರ್ಷಿಕ ಲೆಕ್ಕಪತ್ರ ಸಲ್ಲಿಸದಿದ್ದರಿಂದ 2011ರಲ್ಲಿ 21,000 ಎನ್‍ಜಿಒಗಳು ಮತ್ತು 2014ರಲ್ಲಿ 10,343 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ ವಾಡ್‍ಗೆ ಸೇರಿದ 2, ಗ್ರೀನ್‍ಪೀಸ್ ಇಂಡಿಯಾ ಸೇರಿದಂತೆ ಹಲವಾರು ಎನ್‍ಜಿಒಗಳ ವಿರುದಟಛಿ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಫ್ ಸಿಆರ್‍ಎ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಫೋರ್ಡ್ ಫೌಂಡೇಷನ್‍ನ್ನು ನಿಗಾಪಟ್ಟಿಯಲ್ಲಿಸಲಾಗಿದೆ. ಎಫ್ ಸಿಆರ್‍ಎ ನಿಯಮಗಳ ಉಲ್ಲಂಘನೆಗೆ ಸಂಬಂ„ಸಿದಂತೆ ಗುಪ್ತಚರ ಸಂಸ್ಥೆ ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳಿಂದ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುತ್ತಿದೆ.
ಈ ಕುರಿತು ಅಗತ್ಯ ಪರಿಶೀಲನೆ ನಡೆಸಿದ ನಂತರವೇ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ವಿವರಿಸಿದೆ. ನಿಯಮಗಳನ್ನು ಪಾಲಿಸುವಂತೆ ಹಲವು ಬಾರಿ ಸೂಚನೆಗಳನ್ನು ನೀಡಿದ ನಂತರವೇ ಕ್ರಮಕ್ಕೆ ಮುಂದಾಗಲಾಗಿದೆ. ಹೀಗಾಗಿ ದುರುದ್ದೇಶದಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದಿದ್ದಾರೆ. ಎನ್‍ಜಿಒಗಳ ನೋಂದಣಿ, ಪೂರ್ವಾನುಮತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಎಫ್ ಸಿಆರ್ ಆರ್ ನಿಯಮಗಳನ್ನು ಸರಳಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸುಲಭವಾಗಲಿದೆ ಮತ್ತು ಸಂಸ್ಥೆಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ತರಲಿದೆ. ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ವಿದೇಶಿ ಕೊಡುಗೆಗಳ ಕುರಿತು ಬ್ಯಾಂಕ್‍ಗಳು ಸಹ ಸುಲಭವಾಗಿ ಮಾಹಿತಿ ನೀಡಲು ಇದರಿಂದ ಸಹಕಾರಿಯಾಗಲಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರೆಣ್ ರಿಜಿಜು ಹೇಳಿದ್ದಾರೆ.