ನವದೆಹಲಿ/ಶಿಮ್ಲಾ: ಸಂಸತ್‍ನಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡುತ್ತಿರುವ ಬಿಜೆಪಿ, ಭ್ರಷ್ಟಾಚಾರ ಪ್ರಕರಣ ಸಂಬಂಧ ಉತ್ತರಾಖಂಡ ಸಿಎಂ ಹರೀಶ್ ರಾವತ್‍ರನ್ನು ಟಾರ್ಗೆಟ್ ಮಾಡಿದ ಬೆನ್ನಲ್ಲೇ ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್ ವಿರುದ್ಧ ಲಂಚದ ಆರೋಪ ಹೊರಿಸಿದೆ.
ವೆಂಚರ್ ಎನರ್ಜಿ ಆ್ಯಂಡ್ ಟೆಕ್ನಾಲಜಿ ಪ್ರೈ.ಲಿ. ಎಂಬ ಕಂಪನಿಯ ರದ್ದಾದ ಯೋಜನೆಯನ್ನು ಮರುಜಾರಿ ಮಾಡಲು ವೀರಭದ್ರ ಸಿಂಗ್ ಲಂಚ ಸ್ವೀಕರಿಸಿದ್ದಾರೆ. ನಂತರ ಅದೇ ಹಣದಿಂದ ಸುಮಾರು ರು. 6.61 ಕೋಟಿ ಮೌಲ್ಯದ ಫಾರ್ಮ್ ಹೌಸ್ ಖರೀದಿಸಿದ್ದಾರೆ. ಈ ಫಾರ್ಮ್ ಹೌಸ್ ಸಿಂಗ್ ಅವರ ಪುತ್ರ ಮತ್ತು ಪುತ್ರಿಯ ಹೆಸರಲ್ಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಸಾದ್, 'ಸೋನಿಯಾಜೀ, ರಾಹುಲ್‍ಜೀ ಅವರೇ ಉತ್ತರ ಕೊಡಿ. ಇದು ಲಂಚವಲ್ಲವೇ, ಈಗ ನೀವು ಸಿಂಗ್‍ರ ರಾಜಿನಾಮೆ ಕೇಳುತ್ತೀರಾ' ಎಂದು ಪ್ರಶ್ನಿಸಿದ್ದಾರೆ.
ಮತ್ತೊಮ್ಮೆ ಸಿಬಿಐ ತನಿಖೆಗೂ ಸಿದ್ಧ: ಬಿಜೆಪಿ
ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವೀರಭದ್ರ ಸಿಂಗ್, 'ಇದು 2012ರಲ್ಲಿ ಕೇಳಿಬಂದಿರುವ ಆರೋಪ. ಇದರ ಬಗೆಗಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಾಗಾಗಿ ಈ ಕುರಿತು ಮಾತನಾಡಲು ಇಚ್ಛಿಸುವುದಿಲ್ಲ. ಆದರೆ, ನಾನು ಎರಡನೇ ಬಾರಿ ಸಿಬಿಐ ತನಿಖೆ ಎದುರಿಸಲೂ ಸಿದ್ಧನಿದ್ದೇನೆ. ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲೆಂದು ನನ್ನ ಮೇಲೆ ಆರೋಪ ಹೊರಿಸಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಸಂಚು. ನಾನು ಯಾವ ತಪ್ಪೂ ಮಾಡಿಲ್ಲ. ನನ್ನ ವಿರುದ್ಧ ತನಿಖೆ ಮಾಡಿರುವ ಸಿಬಿಐ ನನಗೆ ಕ್ಲೀನ್‍ಚಿಟ್ ನೀಡಿದೆ' ಎಂದಿದ್ದಾರೆ.