ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರುವಂತೆ ಎಚ್ಚರಿಕೆ ವಹಿಸಿರುವ ಸರ್ಕಾರವು ಗುರುವಾರ ಮುಂಬೈ ಹಾಗೂ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಿಸಿದೆ ಎಂದು ತಿಳಿದುಬಂದಿದೆ.
ಮುಂಬೈ ಸರಣಿ ಸ್ಫೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್ಗೆ ವಿಧಿಸಿದ್ದ ಗಲ್ಲು ಶಿಕ್ಷೆ ವಿರೋಧಿಸಿ ಹಲವು ದಿನಗಳಿಂದಲೂ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ, ಯಾವುದೇ ಅಭಿಪ್ರಾಯಗಳನ್ನು ಲೆಕ್ಕಿಸದ ಸರ್ಕಾರವು ತನ್ನ ನಿಲುವನ್ನೇ ಅಂತಿಮವಾಗಿರಿಸಿಕೊಂಡು ಇಂದು ಬೆಳಗ್ಗೆ 6.30 ವೇಳೆಯಲ್ಲಿ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ಹೀಗಾಗಿ ಪ್ರಕರಣ ಸಂಬಂಧ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿರುವ ಭದ್ರತಾ ಅಧಿಕಾರಿಗಳು ಮುಂಬೈ ಹಾಗೂ ದೆಹಲಿಯಾದ್ಯಂತ ಭದ್ರತೆಗಳನ್ನು ಹೆಚ್ಚಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ.
1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ ಸುಮಾರು 273 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಭೂಗತ ಪಾತಕಿಗೆ ಇಂದು ಮಹಾರಾಷ್ಟ್ರದ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ಜಾರಿ ಮಾಡಲಾಗಿದೆ. ಗಲ್ಲು ಶಿಕ್ಷೆ ಜಾರಿ ವೇಳೆ ನ್ಯಾಯಾಧೀಶರು, ಜೈಲು ವೈದ್ಯರು, ಡಿಐಜಿ ಮತ್ತು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು ಉಪಸ್ಥಿತರಿದ್ದರು.