ನವದೆಹಲಿ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು(ಶುಕ್ರವಾರ) ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಂದೆ ಕದಂಬ ಗಿಡ ನೆಟ್ಟರು. ಈ ಮೂಲಕ ಎಲ್ಲರೂ ಗಿಡ ನೆಟ್ಟು ಪರಿಸರವನ್ನು ಉಳಿಸಿ, ಬೆಳೆಸಿ ಎಂದು ಜನತೆಗೆ ಕರೆ ನೀಡಿದರು.
ಪರಿಸರಕ್ಕೆ ಪೂರಕವಾದ ಕೆಲಸ ಮಾಡುವ ಮೂಲಕ ಪ್ರಕೃತಿಯನ್ನು ರಕ್ಷಿಸಬಹುದು ಎಂದು ನಂತರ ಅವರು ಹೇಳಿದರು. ಗಿಡದ ಜತೆಗೆ ಅವರು, ಸಾಂಪ್ರದಾಯಿಕವಾದ ಮಣ್ಣಿನ ಮಡಕೆಯನ್ನು ಇಟ್ಟರು. ಭೂಮಿಯಲ್ಲಿ ಯಾವತ್ತಿಗೂ ನೀರು ಇರಬೇಕು, ಗಿಡ-ಮರ ಮತ್ತು ಜಲ ಒಂದಕ್ಕೊಂದು ಪೂರಕ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಇದ್ದರು.
ವಿಶ್ವಾದ್ಯಂತ ಪ್ರತಿವರ್ಷ ಜೂನ್ 5ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ. '' ಏಳು ಶತಕೋಟಿ ಕನಸು,ಒಂದು ಗ್ರಹ, ಜಾಗ್ರತೆಯಿಂದ ಬಳಸಿ'' ಎಂಬುದು ಈ ವರ್ಷದ ದಿನಾಚರಣೆಯ ಘೋಷವಾಕ್ಯವಾಗಿದೆ.