ನವದೆಹಲಿ: ವಂಚನೆ ಆರೋಪ ಮೇಲೆ ಡೆಕ್ಕನ್ ಕ್ರಾನಿಕಲ್ ಗ್ರೂಪ್ ನ ಉಪಾಧ್ಯಕ್ಷ ಪಿಕೆ ಅಯ್ಯರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಟಕ್ ನ ಭುವನೇಶ್ವರದ ಟ್ರಿಡೆಂಟ್ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಕಳೆದ ರಾತ್ರಿ 2.30ರ ಸುಮಾರಿಗೆ ಭುವನೇಶ್ವರದ ಪೊಲೀಸ್ ಕಮಿಷನರ್ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಪಿಕೆ ಅಯ್ಯರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
ಕಳೆದ ಎರಡು ತಿಂಗಳಿಂದ ನಕಲಿ ಗುರುತಿನ ಮೇಲೆ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು.ಇದರ ಮಾಹಿತಿ ಪತ್ತೆ ಹಚ್ಚಿದ ಪೊಲೀಸರು ಅಯ್ಯರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಯ್ಯರನ್ನು ಬಂಧಿಸಿದ ಕೂಡಲೇ ಪೊಲೀಸರ್ ಅವರನ್ನು ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಡೆಕ್ಕನ್ ಕ್ರಾನಿಕಲ್ ಗ್ರೂಪ್ ನ ಉಪಾಧ್ಯಕ್ಷ ಅಯ್ಯರ್ ಸೇರಿದಂತೆ ಅಧ್ಯಕ್ಷ ಟಿ.ವೆಂಕಟ್ರಾಂ ರೆಡ್ಡಿ,ವ್ಯವಸ್ಥಾಪಕ ನಿರ್ದೇಶಕ ಟಿ.ವಿನಾಯಕ ರವಿ ರೆಡ್ಡಿಯನ್ನು ಬಂಧಿಸಲಾಗಿದೆ.ವೆಂಕಟ್ರಾಂ ರೆಡ್ಡಿ ಹಾಗೂ ವಿನಾಯಕ ರವಿ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಫೆಬ್ರವರಿಯಲ್ಲಿ ಬಂಧಿಸಿದ್ದರು.
ಕೆನರಾ ಬ್ಯಾಂಕ್(357ಕೋಟಿ ಸಾಲ) ಸೇರಿದಂತೆ ಅನೇಕ ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದು ಹಿಂತಿರುಗಿಸದ ಆರೋಪ ಈ ಮೂವರ ಮೇಲಿದೆ.ಒಂದೇ ಆಸ್ತಿಯನ್ನು ನಾಲ್ಕು ಬ್ಯಾಂಕ್ ಗಳಲ್ಲಿ ಅಡವಿಟ್ಟು 1200 ಕೋಟಿ ರು.ಸಾಲ ಪಡೆದಿದ್ದರು ಎನ್ನಲಾಗಿದೆ.