ಶ್ರೀನಗರ: ಇತ್ತೀಚೆಗಷ್ಟೇ ತಾನು ಭಾರತೀಯನೇ ಅಲ್ಲ ಎಂದು ಹೇಳಿದ್ದ ಹುರಿಯತ್ ಕಾನ್ಫರೆನ್ಸ್ ನ ಮುಖಂಡ ಸಯೀದ್ ಅಲಿ ಷಾ ಗಿಲಾನಿ ಈಗ ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಜೂನ್.14 ರಂದು ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ ಸಿಖ್ ಸಮುದಾಯದ ಅಕಾಲಿ ದಳ ಮುಖಂಡ ಸಿಮ್ರಂಜಿತ್ ಸಿಂಗ್ ಮನ್ ಅವರಿಗೂ ಭಾರತ ವಿರೋಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಕ್ರೈಸ್ತ ಸಮುದಾಯದ ಮುಖಂಡರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಧರ್ಮಾಂಧ ಹಿಂದುತ್ವದ ಅಜೆಂಡಾ ಮೂಲಕ ಕಾಶ್ಮೀರವನ್ನು ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳನ್ನು ಪ್ರತಿಭಟಿಸಲು ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರತ್ಯೇಕತಾವಾದಿ ಗಿಲಾನಿ ತಿಳಿಸಿದ್ದಾರೆ. ರಾಜ್ಯದಲ್ಲಿರುವ ಅಧಿಕಾರ ಬಳಸಿಕೊಂಡು ಹಿಂದುತ್ವ ಅಜೆಂಡಾವನ್ನು ಕಾಶ್ಮೀರದಲ್ಲಿ ಕಾರ್ಯಗತಗೊಳಿಸಲು ಕೋಮುವಾದಿ ಶಕ್ತಿಗಳು ಯತ್ನಿಸುತ್ತಿವೆ. ಇದಕ್ಕಾಗಿ ನೈತಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಗಿಲಾನಿ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ಸರ್ಕಾರದ ಕೋಮುವಾದಿ ಮತ್ತು ಪ್ರತಿಗಾಮಿ ಧೋರಣೆ ಹೀಗೆಯೇ ಮುಂದುವರಿದರೆ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಆದ್ದರಿಂದ, ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ಗಿಲಾನಿ ಕರೆ ನೀಡಿದ್ದಾರೆ. ಭಾರತ ವಿರೋಧಿ ಧೋರಣೆಗಳಿಂದಲೇ ಪ್ರಸಿದ್ಧರಾಗಿರುವ ಗಿಲಾನಿ, ಕಾಶ್ಮೀರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ವಿವಾದಕ್ಕೀಡಾಗಿದ್ದರು.