ಶ್ರೀನಗರ: ಹುರಿಯತ್ ಕಾನ್ಫರೆನ್ಸ್ ನ ಮುಖಂಡ ಸಯೀದ್ ಅಲಿ ಷಾ ಗಿಲಾನಿ ಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸರ್ಕಾರಿ ನೌಕರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತನಾಗಿದ್ದಾನೆ.
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹಮದ್ ಅಲ್ತಾಫ್ ಶೇಖ್ ಮೇಲೆ ಭಯೋತ್ಪಾದಕರು ಹಲವು ಸುತ್ತು ಗುಂಡು ಹಾರಿಸಿದ್ದು, ತಲೆ, ಕುತ್ತಿಗೆ, ಎದೆಯ ಭಾಗಗಳಿಗೆ ಗುಂಡು ಹಾರಿಸಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಪೊಲೀಸ್ ವರದಿಗಳ ಪ್ರಕಾರ ಹತ್ಯೆಗೀಡಾಗಿರುವ ವ್ಯಕ್ತಿ, ಪ್ರತ್ಯೇಕತಾವಾದಿ ಸಯೀದ್ ಅಲಿ ಗಿಲಾನಿಯ ತೆಹರಿಕ್-ಎ- ಹುರಿಯತ್ ನ ಸದಸ್ಯನಾಗಿದ್ದು ಗಿಲಾನಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಪ್ರತ್ಯೇಕತವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಹಿಂದೆಮೊಹಮದ್ ಅಲ್ತಾಫ್ ಶೇಖ್ ನನ್ನು ಬಂಧಿಸಲಾಗಿತ್ತು.
ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಗಿಲಾನಿ ಪ್ರಾಬಲ್ಯವಿರುವ ಪ್ರದೇಶದಲ್ಲೇ ಮೊಹಮದ್ ಅಲ್ತಾಫ್ ಶೇಖ್ ನನ್ನು ಹೊಡೆದುರುಳಿಸಿರುವುದು ಹುರಿಯತ್ ಕಾನ್ಫರೆನ್ಸ್ ನ ಮುಖಂಡರಿಗೆ ತೀವ್ರ ಆಕ್ರೋಶ ಉಂಟುಮಾಡಿದೆ. ಇತ್ತೀಚೆಗಷ್ಟೇ ಕಾಶ್ಮೀರದ ಉತ್ತರ ಭಾಗದಲ್ಲಿ ಮೊಬೈಲ್ ಅಂಗಡಿಗಳ ಮೇಲೆ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದ್ದ ಲಷ್ಕರ್ -ಎ- ಇಸ್ಲಾಂ ಎಂಬ ಭಯೋತ್ಪಾದನಾ ಸಂಘಟನೆ ಮೊಹಮದ್ ಅಲ್ತಾಫ್ ಶೇಖ್ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರತ್ಯೇಕತಾವಾದಿ ಮುಖಂಡರು ಮಾತ್ರ ಹತ್ಯೆ ಹಿಂದೆ ಭಾರತೀಯ ಗುಪ್ತ ಸಂಸ್ಥೆಗಳ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಿಲಾನಿ, ಭಯೋತ್ಪಾದನೆಯನ್ನು, ಭಯೋತ್ಪಾದನೆ ಮೂಲಕವೇ ನಾಶ ಮಾಡುತ್ತೇವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ ನಂತರ ಕಾಶ್ಮೀರದಲ್ಲಿ ಈ ರೀತಿಯ ನಿಗೂಢ ಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಮೊಹಮದ್ ಅಲ್ತಾಫ್ ಶೇಖ್ ಹತ್ಯೆಯನ್ನು ಖಂಡಿಸಿ ಜೂ.11 ರಂದು ಬಾರಾಮುಲ್ಲಾ ಜಿಲ್ಲೆ ಬಂಗ್ ಗೆ ಕರೆ ನೀಡಲಾಗಿದೆ. ಜಮ್ಮು-ಕಾಶ್ಮೀರದ ಸೋಪೊರೆ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸಲು ಕೆಲ ಶಕ್ತಿಗಳು ಯತ್ನಿಸುತ್ತಿವೆ. ಮೊಹಮದ್ ಅಲ್ತಾಫ್ ಶೇಖ್ ಹತ್ಯೆ ಕೂಡ ಇದರ ಒಂದು ಭಾಗವಾಗಿದ್ದು, ಹತ್ಯೆ ಮಾಡಿದವರನ್ನು ಬಿಡುವುದಿಲ್ಲ ಎಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ.