ನವದೆಹಲಿ: ಈಶಾನ್ಯ ಪ್ರದೇಶದಲ್ಲಿರುವ ಭಯೋತ್ಪಾದಕರ ವಿರುದ್ಧ ಮುಂದಿನ ಜಂಟಿ ಕಾರ್ಯಾಚರಣೆ ನಡೆಸುವ ಬಗ್ಗೆ ಮಾತುಕತೆ ನಡೆಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸದ್ಯದಲ್ಲೇ ಮಯನ್ಮಾರ್ ಗೆ ಭೇಟಿ ನೀಡಲಿದ್ದಾರೆ.
ಮಯನ್ಮಾರ್ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿ 100 ಕ್ಕೂ ಹೆಚ್ಚು ಭಯೋತ್ಪಾಕಾರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಭಾರತೀಯ ಸೇನೆ ಹಾಗೂ ಭಾರತ ಸರ್ಕಾರ ಈಶಾನ್ಯ ಭಾಗದಲ್ಲಿ ಭಯೋತ್ಪಾದಕರ ವಿರುದ್ಧ ಮತ್ತಷ್ಟು ಸೇನಾ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿದೆ. ಮಯನ್ಮಾರ್ ನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಅಜಿತ್ ದೋವಲ್, ಮಯನ್ಮಾರ್ ಗೆ ಭೇಟಿ ನೀಡಲಿದ್ದಾರೆ. ಉಭಯ ರಾಷ್ಟ್ರಗಳ ಸೇನಾ ಪಡೆ ಹಾಗೂ ಸರ್ಕಾರ ಭಯೋತ್ಪಾದಕರನ್ನು ನಿರ್ನಾಮ ಮಾಡುವ ವಿಷಯದ ಬಗ್ಗೆ ನಿರಂತರ ಸಂಪರ್ಕದಲ್ಲಿವೆ ಎಂದು ತಿಳಿದುಬಂದಿದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಭಯೋತ್ಪಾದಕರ 20 ಕ್ಕೂ ಹೆಚ್ಚು ಕ್ಯಾಂಪ್ ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜೂ.9 ರಂದು ಬೆಳಿಗ್ಗೆ ಮಯಾನ್ಮಾರ್ ಗಡಿ ಭಾಗದಲ್ಲಿ ಭಯೋತ್ಪಾದಕರ ವಿರುದ್ಧ ಏಕಾಏಕಿ ದಾಳಿ ನಡೆಸಿದ್ದ ಭಾರತೀಯ ಸೈನಿಕರು 100 ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು.
ಗಡಿ ಸಹಕಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮಯನ್ಮಾರ್ ನೊಂದಿಗೆ ಮಾತುಕತೆ ನಡೆಸಿದ್ದ ಭಾರತ ಸರ್ಕಾರ ಗಡಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿಹಾಕಿತ್ತು. ಇದರಿಂದಾಗಿ ಭದ್ರತಾ ಸಹಕಾರ ಮತ್ತು ಎರಡು ದೇಶಗಳ ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯಕ್ಕೆ ಪರಿಣಾಮಕಾರಿಯಾಗಿದೆ.