ನವದೆಹಲಿ: ಐಪಿಎಲ್ ಕ್ರಿಕೆಟ್ ಹಗರಣದ ಆರೋಪ ಹೊತ್ತು ಲಂಡನ್ ನಲ್ಲಿ ವಾಸಿಸುತ್ತಿರುವ ಬಿಸಿಸಿಐ ಮಾಜಿ ಉಪಾಧ್ಯಕ್ಷ ಲಲಿತ್ ಮೋದಿಗೆ ವೀಸಾ ನೀಡಲು ನೆರವು ನೀಡಲು ಶಿಫಾರಸು ಮಾಡುವ ಮೂಲಕ ಆರೋಪಕ್ಕೆ ಗುರಿಯಾಗಿ ರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸೇರಿ ವಿಪಕ್ಷಗಳು ಪಟ್ಟು ಹಿಡಿದಿವೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪಿ.ಎಲ್.ಪುಣಿಯಾ ಮಾತನಾಡಿ, ಸುಷ್ಮಾ ಸ್ವರಾಜ್ ಮತ್ತು ಲಲಿತ್ ಮೋದಿ ಅವರಿಗೆ ಸಂಪರ್ಕಗಳಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಒಬ್ಬ ಕಳಂಕಿತ ವ್ಯಕ್ತಿಗೆ ಶಿಫಾರಸ್ಸು ಮಾಡಿದ್ದರಿಂದ ಸುಷ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಲಲಿತ್ ಮೋದಿ ವಿರುದ್ಧ ನೊಟೀಸು ಜಾರಿ ಮಾಡಲಾಗಿದ್ದರೂ ಅವರಿಗೆ ವಿಶೇಷ ಅನುಕೂಲ ಒದಗಿಸಲಾಗಿದೆ.24 ಗಂಟೆಯೊಳಗೆ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಯಿತು. ಸುಷ್ಮಾ ಅವರು ಅನಧಿಕೃತವಾಗಿ ಮೋದಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾನವೀಯತೆ ನೆಲೆಯಿಂದ ಮೋದಿಗೆ ಸಹಾಯ ಮಾಡಿದ್ದೇನೆ ಎಂಬುದೆಲ್ಲ ಸುಳ್ಳು. ಬಿಜೆಪಿ ನೀಡುತ್ತಿರುವ ಕಾರಣಗಳೆಲ್ಲ ಕುಂಟು ನೆಪವಾಗಿದೆ ಎಂದು ದೂರಿದರು.
ಪೋರ್ಚುಗಲ್ ಕಾನೂನು ಪ್ರಕಾರ, ಪತ್ನಿ ಶಸ್ತ್ರಚಿಕಿತ್ಸೆಗೆ ಒಳಪಡುವ ಮೊದಲು ಪತಿ ದಾಖಲೆಗಳಿಗೆ ಸಹಿ ಹಾಕಬೇಕುವ ಅಗತ್ಯವಿರುವುದಿಲ್ಲ. ಸುಷ್ಮಾ ಅವರು ಸ್ನೇಹದ ಆಧಾರದ ಮೇಲೆ ಮೋದಿ ಅವರಿಗೆ ಸಹಾಯ ಮಾಡಿದ್ದಾರೆ. ಕಾನೂನಿನ ಪ್ರಕಾರ, ಲಲಿತ್ ಮೋದಿ ಅವರನ್ನು ಭಾರತಕ್ಕೆ ಕರೆತಂದು ಇಲ್ಲಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರು.