ನವದೆಹಲಿ: ಬಹುಕೋಟಿ ಹಗರಣ ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಕುರಿತಂತೆ ಕೊರತೆ ಇರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸರಿಯಾದ ರೀತಿಯಲ್ಲಿ ಸಲ್ಲಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯವು ಅಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದೆ.
ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು, ಆರೋಪಿಗಳಾಗಿರುವ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಹಾಗೂ ಇನ್ನಿತರೆ ಆರೋಪಿಗಳ ಕುರಿತಂತೆ ದಾಖಲೆಗಳ ಕೊರತೆಯಿದೆ ಎಂದು ಹೇಳಿದೆ. ಪ್ರಕರಣ ಸಂಬಂಧ ಈಗಾಗಲೇ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಸರಿಯಾದ ರೀತಿಯಲ್ಲಿ ಸಂಗ್ರಹವಾಗಿಲ್ಲ. ಕೆಲವು ದಾಖಲೆಗಳು ಅಗತ್ಯವೇ ಇಲ್ಲದಿದ್ದರು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇನ್ನು ಕೆಲವು ದಾಖಲೆಗಳು ಕಾಣೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಅಧಿಕಾರಿಗಳು ಆರೋಪಿಗಳ ಕುರಿತಂತೆ ಕೊರತೆಯಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸರಿಯಾಗಿ ನೀಡಬೇಕು ಎಂದು ಹೇಳಿದೆ.
ಹಗರಣ ಕುರಿತಂತೆ ವಿಚಾರಣೆ ವೇಳೆ ಆರೋಪಿಗಳು ಸಿಬಿಐ ಕೇಳಿದ ಎಲ್ಲಾ ದಾಖಲೆಗಳನ್ನು ಸಿಡಿಯ ಮೂಲಕ ಸಿಬಿಐ ಅಧಿಕಾರಿಗಳಿಗೆ ನೀಡಿದ್ದೆವು ಎಂದು ಹೇಳಿದರು. ನಂತರ ಸಿಡಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ನೀಡಿರುವ ಕೆಲವು ದಾಖಲೆಗಳು ಅಪೂರ್ಣ ಎನಿಸಿತು. ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ದಾಖಲೆಗಳನ್ನು ನ್ಯಾಯಾಲಯವು ಪ್ರತಿನಿತ್ಯ ಪರಿಶೀಲಿಸುತ್ತಿರುವುದರಿಂದ ಕೆಲವು ದಾಖಲೆಗಳು ಕಾಣೆಯಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ಈ ಕುರಿತ ವಿಚಾರಣೆಗೆ ಮತ್ತಷ್ಟು ಸಮಯ ಬೇಕಿದೆ ಎಂದು ಹಿರಿಯ ವಕೀಲ ರಮೇಶ್ ಗುಪ್ತಾ ಹೇಳಿದ್ದಾರೆ.